ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದ ವಕೀಲಿ ವೃತ್ತಿಯಲ್ಲಿ ಸಾಂಪ್ರದಾಯಕ ಕೆಲಸಗಳು ಕ್ರಮೇಣ ಕಣ್ಮರೆಯಾಗಲಿದ್ದು ಮತ್ತು ಇದೇ ವೃತ್ತಿಯಲ್ಲಿ ವಿಫುಲವಾಗಿ ಲಭ್ಯ ಆಗುತ್ತಿರುವ ನೂತನ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲು ಯುವ ವಕೀಲರು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುವ ಅನಿವಾರ್ಯತೆ ಅರಿಯಬೇಕು ಎಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದ್ದಾರೆ.
- ಆರ್.ಎಲ್. ಕಾನೂನು ಕಾಲೇಜಿನ ಕಾರ್ಯಕ್ರಮದಲ್ಲಿ ನ್ಯಾ.ನಾಗಮೋಹನ್ ದಾಸ್
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದ ವಕೀಲಿ ವೃತ್ತಿಯಲ್ಲಿ ಸಾಂಪ್ರದಾಯಕ ಕೆಲಸಗಳು ಕ್ರಮೇಣ ಕಣ್ಮರೆಯಾಗಲಿದ್ದು ಮತ್ತು ಇದೇ ವೃತ್ತಿಯಲ್ಲಿ ವಿಫುಲವಾಗಿ ಲಭ್ಯ ಆಗುತ್ತಿರುವ ನೂತನ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲು ಯುವ ವಕೀಲರು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುವ ಅನಿವಾರ್ಯತೆ ಅರಿಯಬೇಕು ಎಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.
ನಗರದಲ್ಲಿ ಇತ್ತೀಚೆಗೆ ಆರ್.ಎಲ್. ಕಾನೂನು ಕಾಲೇಜಿನ 2026-27ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್‌ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಮ್ಮದು ಜಗತ್ತಿನಲ್ಲಿಯೇ ಅತಿ ದೊಡ್ಡ ನ್ಯಾಯಾಂಗ ವ್ಯವಸ್ಥೆ. ದೇಶದಲ್ಲಿ 25,000 ನ್ಯಾಯಾಧೀಶರು, 20 ಲಕ್ಷ ವಕೀಲರು, 25 ಲಕ್ಷ ನ್ಯಾಯಾಂಗ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ದೇಶದ ವಿವಿಧ ನ್ಯಾಯಾಲಯಗಳಲ್ಲಿ 5 ಕೋಟಿ ಪ್ರಕರಣಗಳು ಬಾಕಿ ಇವೆ. ನದಿ ನೀರಿನ ಸಮಸ್ಯೆ, ಗಡಿ ಸಮಸ್ಯೆ ಮತದಾರರ ಪಟ್ಟಿ ಸಮಸ್ಯೆ ಹೀಗೆ ಬೇರೆಲ್ಲಾ ತೀರ್ಮಾನ ಆಗಬೇಕಾದ ಸಂಗತಿಗಳು ನ್ಯಾಯಾಲಯದ ಅಂಗಳಕ್ಕೆ ಒಂದು ಬೀಳುತ್ತಿವೆ. ಇಂತಹ ಸಂಕೀರ್ಣ ಸಮಸ್ಯೆಗಳ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ, ನ್ಯಾಯಾಲಯಗಳಲ್ಲಿ ಸಮರ್ಥವಾಗಿ ವಾದಿಸಲು ಗುಣಮಟ್ಟದ ವಕೀಲರ ಅಗತ್ಯ ಈ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.
ಅಮಾನವೀಯ ವ್ಯವಸ್ಥೆಗಳ ವಿರುದ್ಧ ಹೋರಾಟ ನಡೆಸಿ ಅವುಗಳಿಂದ ವಿಮುಕ್ತರಾಗಿದ್ದೇವೆ ಎಂದುಕೊಳ್ಳುವಾಗಲೇ ಅವು ಮತ್ತೆ ಬೇರೆ ಬೇರೆ ರೂಪಗಳಲ್ಲಿ ಮರುಕಳಿಸುತ್ತಿವೆ. ಈ ಬಗ್ಗೆ ಯುವಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ದೇಶಕ್ಕಾಗಿ ತ್ಯಾಗ, ಬಲಿದಾನಗೈದು, ಜೈಲುಶಿಕ್ಷೆ ಅನುಭವಿಸಿದ ನಾಯಕರ ಬಗ್ಗೆ ಇಂದು ಹಲವರು ಲಘುವಾಗಿ ಮಾತನಾಡುತ್ತಿರುವ ಪ್ರವೃತ್ತಿಯ ಬಗ್ಗೆ ಅವರು ಖೇದ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವ ಮೆಮೋರಿಯಲ್ ಟ್ರಯಲ್ಸ್ ಪುಸ್ತಕಗಳನ್ನು ಕಾಲೇಜಿನ ನಿರ್ದೇಶಕರಾದ ಡಾ. ಸೋಮಶೇಖರಪ್ಪ ಬಿಡುಗಡೆ ಮಾಡಿ, ಪುಸ್ತಕದ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಪಿ. ಬಸವನಗೌಡ ಮಾತನಾಡಿ, ಕಾಲೇಜಿನಲ್ಲಿ ರಚಿಸಿರುವ ವಿವಿಧ ಸಮಿತಿಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ಅವುಗಳನ್ನು ಕಲಿಕೆಯ ವೇದಿಕೆಗಳನ್ನಾಗಿ ಮಾಡಿಕೊಳ್ಳುವಂತೆ ಕೋರಿದರು.
ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಪಂಕಜ ಸ್ವಾಗತಿಸಿ, ಸಹ ಪ್ರಾಧ್ಯಾಪಕ ಡಾ.ವಿದ್ಯಾಧರ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಕೆ.ಎಂ. ಪ್ರದೀಪ್, ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆ ಅಂಬಿಕಾ ಪಾಟೀಲ್, ಕಾರ್ಯದರ್ಶಿ ಎಂ.ಬಿ.ಜ್ಯೋತಿ ವೇದಿಕೆಯಲ್ಲಿದ್ದರು.
- - -
(ಬಾಕ್ಸ್)
* 40,000 ತೀರ್ಪು ನೀಡಿದ್ದು ದಾಖಲೆ: ಅರುಣಕುಮಾರ್
ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಯಶಸ್ವಿ ವಕೀಲಿಯ ನಂತರ ಹತ್ತು ವರ್ಷ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಾಗಮೋಹನ ದಾಸ್ 40,000 ತೀರ್ಪುಗಳನ್ನು ನ್ಯಾಯಾಲಯದಲ್ಲಿ ನೀಡಿ ದಾಖಲೆ ಸ್ಥಾಪಿಸಿದ್ದಾರೆ. ನಿವೃತ್ತಿಯ ನಂತರವೂ ಕಾನೂನು ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ. ಅವರ ಸಂವಿಧಾನ ಓದು ಪುಸ್ತಕ 6 ಭಾಷೆಗಳಿಗೆ ಭಾಷಾಂತರಗೊಂಡು, 20 ಲಕ್ಷ ಪ್ರತಿಗಳ ಮಾರಾಟ ಕಂಡಿದೆ ಎಂದು ತಿಳಿಸಿದರು.
- - -
-9ಕೆಡಿವಿಜಿ42: ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮೆಮೋರಿಯಲ್ ಟ್ರಯಲ್ಸ್ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.