ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎನ್ನುವ ಉದ್ದೇಶದಿಂದ ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ಸ್ಪರ್ಧೆ ಯಾರ ವಿರುದ್ಧವೂ ಅಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಗೆ ಕೆಲ ಕಾರಣದಿಂದ ಟಿಕೆಟ್ ಕೈ ತಪ್ಪಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಇಲ್ಲೂ ಕೂಡ ನನಗೆ ಟಿಕೆಟ್ ಸಿಗಲಿಲ್ಲ. ಪದವೀಧರ ಕಾರ್ಯಕರ್ತರ ಒತ್ತಾಯದಿಂದಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಸ್ಪರ್ಧೆ ಪಕ್ಷದ ವಿರುದ್ಧ ಅಥವಾ ಯಾವುದೇ ನಾಯಕರ ವಿರುದ್ಧ ಅಲ್ಲ. ನಾನು ಈ ಚುನಾವಣೆಯಲ್ಲಿ ಗೆದ್ದರೆ ಬಿಜೆಪಿಯಿಂದಲೇ ಮೇಲ್ಮನೆಗೆ ಹೋಗುತ್ತೇನೆ. ಒಂದು ವೇಳೆ ಸೋತರೆ ಬಿಜೆಪಿ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿಯ ಪರಿವಾರದ ಜೊತೆ ಮಾತನಾಡಲ್ಲ:ಬಿಜೆಪಿಯಲ್ಲಿ ಪಕ್ಷದ ಸುತ್ತ ಸುತ್ತುವವರಿಗೆ ಆದ್ಯತೆ ನೀಡುತ್ತಿರುವುದರಿಂದ ಬೇಸರವಾಗಿದೆ. ನನಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಸಿಗಲಿಲ್ಲ. ಹೋಗಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸಿಕ್ಕಿದ್ದರೂ ಕೂಡ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ. ಬಿಜೆಪಿಯ ಪರಿವಾರದ ಜೊತೆ ಮಾತನಾಡುವ ಸಂಪ್ರದಾಯ ಮತ್ತು ಸೌಜನ್ಯವೇ ಈಗ ಇಲ್ಲವಾಗಿದೆ. ಮೊದಲು ಪಕ್ಷದ ಮಂಡಲ ಮಟ್ಟದಿಂದ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುತ್ತಿತ್ತು. ಈಗ ಆ ಪದ್ಧತಿ ಇಲ್ಲವಾಗಿದೆ. ಯಾರಿಗೆ ಬೇಕೋ ಅವರಿಗೆ ಟಿಕೆಟ್ ಕೊಡಲಾಗುತ್ತಿದೆ. ಇದು ಬಿಜೆಪಿಯ ಸಂಸ್ಕೃತಿಯಲ್ಲ, ಪಕ್ಷ ಈ ರೀತಿ ಮಾಡಿದರೆ ಮುಂದೊಂದು ದಿನ ಬೆಲೆತ್ತೆತ್ತ ಬೇಕಾಗುತ್ತದೆ ಎಂದು ಖಾರವಾಗಿ ಹೇಳಿದರು.
ಸೌಜನ್ಯಕ್ಕೂ ಭೇಟಿಯಾಗಿಲ್ಲ:ಬಿಜೆಪಿಯಿಂದ ಸ್ಪರ್ಧಿಸಿರುವ ಡಾ.ಧನಂಜಯ ಸರ್ಜಿಯವರು ಸೌಜನ್ಯಕ್ಕಾಗಿಯಾದರು ನನ್ನ ಭೇಟಿಯಾಗಲಿಲ್ಲ, ಮಾತು ಆಡಲಿಲ್ಲ. ಹೋಗಲಿ ಅವರಿಗೆ ಟಿಕೆಟ್ ನೀಡುವುದನ್ನು ಬಿಟ್ಟು ಪಕ್ಷಕ್ಕಾಗಿ ದುಡಿದ ದತ್ತಾತ್ರಿಯವರಿಗೂ, ಗಿರೀಶ್ ಪಟೇಲ್ ರಿಗೂ ಅಥವಾ ಮತ್ಯಾ ಯಾವುದೇ ನಿಷ್ಠಾವಂತ ಕಾರ್ಯಕರ್ತರಿಗೆ ನೀಡಿದ್ದರೆ ನಾನು ಅವರ ಪರವಾಗಿ ನಿಲ್ಲುತ್ತಿದ್ದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶಂಕರ್, ದೇವದಾಸ್ ನಾಯಕ್, ಕಾಚಿನಕಟ್ಟೆ ಸತ್ಯನಾರಾಯಣ, ವಕೀಲ ವಾಗೀಶ್, ಅ.ಮಾ.ಪ್ರಕಾಶ್, ರಾಜಯ್ಯ, ಪ್ರದೀಪ ಚಂದ್ರ, ಮೋಹನ್ ಜಾದವ್, ಎಚ್.ಶಂಕರ್, ಚಂದ್ರಶೇಖರ್, ನರೇಶ್ ಜೈನ್, ಸುಬ್ರಹ್ಮಣ್ಯ ಇದ್ದರು.ಶಿಕ್ಷಣ ಕ್ಷೇತ್ರ ನನ್ನ ಆಸಕ್ತಿಯ ವಿಷಯ
ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ನನಗೆ ಗೊತ್ತು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳ ನಾನು ಮಾಡಿದ್ದೇನೆ. ಇದು ನನ್ನ ಆಸಕ್ತಿಯ ವಿಷಯವಾಗಿದೆ. ಸಾಧಕ ಶಿಕ್ಷಕ ಪ್ರಶಸ್ತಿಯನ್ನು ಆರಂಭಿಸಿದವನು ನಾನು. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಎಲ್ಲಾ ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡಿದ್ದೇನೆ. ಉಡುಪಿಯಲ್ಲಿ ಸ್ನಾತಕೋತ್ತರ ಪದವಿ ಕಾಲೇಜು ಆರಂಭಿಸಲು ಪ್ರಯತ್ನಿಸಿದ್ದೇನೆ. ನಾನು ಗೆದ್ದರೆ ನೈಋತ್ಯ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವೆ, ಹಳೆ ಪಿಂಚಣಿ ವ್ಯವಸ್ಥೆ ಜಾರಿ ನನ್ನ ಮೊದಲ ಆದ್ಯತೆ. ಪದವೀಧರರಿಗೆ ಕೌಶಲ್ಯ ತರಬೇತಿ ನೀಡುವುದು, ಉದ್ಯಮ ವಲಯ ಸ್ಥಾಪಿಸುವುದು ಸೇರಿ ಹಲವು ಅಭಿವೃದ್ಧಿಗಳನ್ನು ಸರ್ಕಾರದ ಮಟ್ಟದಲ್ಲಿ ಜಾರಿಗೆ ತರಲು ನಾನು ಖಂಡಿತ ಪರಿಷತ್‍ನಲ್ಲಿ ಧ್ವನಿಯೆತ್ತುತ್ತೇನೆ ಎಂದು ರಘುಪತಿ ಭಟ್ ಹೇಳಿದರು.