ಭ್ರಷ್ಟ ಸರ್ಕಾರ ವಜಾಗೊಳಿಸಲು ಶೀಘ್ರವೇ ರಾಷ್ಟ್ರಪತಿಗೆಳಿಗೆ ದೂರು: ವಿಜಯೇಂದ್ರ

KannadaprabhaNewsNetwork | Published : Oct 16, 2024 12:35 AM

ಸಾರಾಂಶ

ಪ್ರೇರಣಾ ಟ್ರಸ್ಟ್ ಕೇಸ್ ವಿಚಾರದಲ್ಲಿ ಯಡಿಯೂರಪ್ಪ ಅವರ ಮೇಲೆ ಆರೋಪಗಳನ್ನು ಹೊರಿಸುತ್ತಾರೆ, ಈ ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾಹಿತಿ ಕೊರತೆ ಇದೆ. ಅದಕ್ಕೆ ಸಂಬಂಧಿಸಿದ ಕೋರ್ಟ್‌ ಜಡ್ಜ್‌ಮೆಂಟ್‌ ಕಾಪಿ ಬೇಕಾದರೆ ಕಾಂಗ್ರೆಸ್ ಮುಖಂಡರಿಗೆ ಕಳಿಸಿಕೊಡ್ತೇನೆ ಎಂದು ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಿಂದೂ ವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಾಗೂ ಭ್ರಷ್ಟ ಮುಖ್ಯಮಂತ್ರಿಗಳ ವಿರುದ್ಧ ಶೀಘ್ರವೇ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಬಂಟ್ವಾಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ, ಮುಡಾ ಸೈಟು ಹಗರಣದ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್‌ ಸರ್ಕಾರ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನ ವಜಾ ಮಾಡಲು ರಾಷ್ಟ್ರಪತಿಗಳಿಗೆ‌ ಮನವಿ ಸಲ್ಲಿಸುತ್ತೇವೆ ಎಂದರು.

ಹುಬ್ಬಳ್ಳಿ ಘಟನೆಯಲ್ಲಿ ಭಾಗಿಯಾದ ಆರೋಪಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತಿದ್ದು, ಅವರ ಮೇಲಿನ ಕೇಸ್‌ ವಾಪಸ್‌ ಪಡೆಯಲು ಮುಂದಾಗಿರುವುದು ಅಕ್ಷಮ್ಯ ಅಪರಾಧ. ಸರ್ಕಾರದ ಈ ನೀತಿಯನ್ನು ಖಂಡಿಸಿ ಅ.೨೫ ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ. ಈ ಅಯೋಗ್ಯ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ವಿಪಕ್ಷವಾಗಿ ಜವಾಬ್ದಾರಿಯಿಂದ ಕೆಲಸ: ವಿಪಕ್ಷವಾಗಿ ನಾವು ಜವಾಬ್ದಾರಿಯಿಂದ ಕೆಲಸ ಮಾಡ್ತಾ ಇದ್ದೇವೆ, ಆಡಳಿತ ಪಕ್ಷ ಕೊಟ್ಟ ಭರವಸೆ ತಪ್ಪಿದಾಗ ನಾವು ಹೋರಾಟ ಮಾಡ್ತಾ ಇದೀವಿ, ನಾಗೇಂದ್ರರಂಥ ಸಚಿವರು ರಾಜಿನಾಮೆ ಕೊಟ್ಟಿರುವುದು ಬಿಜೆಪಿ‌ ಕಾರಣದಿಂದ, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಸೈಟುಗಳನ್ನು ಸರ್ಕಾರಕ್ಕೆ ವಾಪಸ್‌ ನೀಡಿರುವುದೂ ಬಿಜೆಪಿಯ ಹೋರಾಟದಿಂದ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ ಎಂದ ಅವರು, ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಭರದಲ್ಲಿ ಹಿಂದೂಗಳಿಗೆ ಅವಮಾನ ಮಾಡುತ್ತಿದೆ, ಗಣಪತಿ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗುತ್ತದೆ, ಹುಬ್ಬಳ್ಳಿಯಲ್ಲಿ ಕಾನೂನು ಕೈಗೆತ್ತಿಕೊಂಡು, ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಪ್ರಕರಣಗಳನ್ನು ಹಿಂಪಡೆಯುವ ಪ್ರಯತ್ನಗಳಾಗುತ್ತಿದೆ ಎಂದು ವಿಜಯೇಂದ್ರ ಹೇಳಿದರು.

ಚನ್ನಪಟ್ಟಣ, ಸಂಡೂರು ಉಪಚುನಾವಣೆ ಅಭ್ಯರ್ಥಿ ಘೋಷಣೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವೂ ರಾಷ್ಟ್ರೀಯ ನಾಯಕರ ಮುಂದೆ ಇದೆ, ಹಲವು ಬಾರಿ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಆಗಿದೆ. ಡಿಕೆಶಿ ಬೆಂಗಳೂರು ಗ್ರಾಮಾಂತರದಲ್ಲೂ ನಾನೇ ಅಭ್ಯರ್ಥಿ ಅಂದಿದ್ದರು, ಆದರೆ ಅಲ್ಲಿನ ಜನ ಅವರಿಗೆ ಅಲ್ಲಿ ಪಾಠ ಕಲಿಸಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲೂ ಜನರು ಅವರಿಗೆ ಪಾಠ ಕಲಿಸ್ತಾರೆ. ಬಿಜೆಪಿ ಶೀಘ್ರವೇ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ ಎಂದರು. ಪ್ರೇರಣಾ ಟ್ರಸ್ಟ್ ಕೇಸ್ ವಿಚಾರದಲ್ಲಿ ಯಡಿಯೂರಪ್ಪ ಅವರ ಮೇಲೆ ಆರೋಪಗಳನ್ನು ಹೊರಿಸುತ್ತಾರೆ, ಈ ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಮಾಹಿತಿ ಕೊರತೆ ಇದೆ. ಅದಕ್ಕೆ ಸಂಬಂಧಿಸಿದ ಕೋರ್ಟ್‌ ಜಡ್ಜ್‌ಮೆಂಟ್‌ ಕಾಪಿ ಬೇಕಾದರೆ ಕಾಂಗ್ರೆಸ್ ಮುಖಂಡರಿಗೆ ಕಳಿಸಿಕೊಡ್ತೇನೆ ಎಂದು ವಿಜಯೇಂದ್ರ ಹೇಳಿದರು.

ಪರಿಷತ್ ಉಪಚುನಾವಣೆಯ ಕ್ಷೇತ್ರವನ್ನು ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿನಿಧಿಸಿದ್ದು, ಈ ಬಾರಿ ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದೇವೆ, ಹಾಗಾಗಿ ಇಲ್ಲಿ ನಾವು ದೊಡ್ಡ ಅಂತರದಲ್ಲಿ ಮತ್ತೊಮ್ಮೆ ಗೆಲ್ಲುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸುಧಾಕರ ರೆಡ್ಡಿ, ಸಂಸದರಾದ, ಕ್ಯಾ. ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಇದ್ದರು.

Share this article