ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಟಿ.ಎಂ.ಹೊಸೂರು, ಅಲ್ಲಾಪಟ್ಟಣ, ಮುಂಡುಗದೊರೆ, ಕಾಳೇನಹಳ್ಳಿ, ಶ್ರೀರಾಂಪುರ ಸೇರಿದಂತೆ ಇತರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಸಿಡಿಮದ್ದು ಸಿಡಿಸುವುದರಿಂದ ಗ್ರಾಮಗಳಲ್ಲಿನ ಮನೆಗಳ ಬಿರುಕು, ಜಮೀನಿನಲ್ಲಿ ಗಣಿ ಧೂಳಿಗೆ ಬೆಳೆಗಳ ಹಾನಿಯಾಗುತ್ತಿತ್ತು.
ಅಲ್ಲದೇ, ಗ್ರಾಮಗಳಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮದಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿರುವ ಬಗ್ಗೆ ಹಲವು ಸಂಘಟನೆಗಳು, ವಿವಿಧ ಗ್ರಾಮಗಳ ಮುಖಂಡರು ತಹಸೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಈ ಹಿಂದೆ ಒತ್ತಾಯಿಸಿದ್ದರು.ಮುಂಡುಗದೊರೆ ಬಳಿಯ ಸ.ನಂ.351ರ ಸರ್ಕಾರಿ ಗೋಮಾಳ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬ ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಾ ಟಿ.ವಿ. ಹಾಗೂ ಭೂ ವಿಜ್ಞಾನಿ ಸುಬ್ರಹ್ಮಣ್ಯ, ಪೊಲೀಸ್ ಇಲಾಖೆ ಡಿವೈಎಸ್ಪಿ ಶಾಂತಮಲ್ಲಪ್ಪ, ವಲಯ ಅರಣ್ಯಾಧಿಕಾರಿ ಶೈಲಜಾ, ಉಪ ವಲಯ ಅರಣ್ಯಾಧಿಕಾರಿ ನಾಗರಾಜ್ ಬಿ.ಎಂ ಹಾಗೂ ಕಂದಾಯ ಅಧಿಕಾರಿಗಳು ಸೇರಿದ ತಂಡ ರಚಿಸಿ ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ಈ ವೇಳೆ ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳದಲ್ಲಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ. ನಂತರ ಕಲ್ಲು ಗಣಿಗಾರಿಕೆ ನಡೆಸಲು ಬಳಸುತ್ತಿದ್ದ ಎರಡು ಹಿಟಾಚಿ ಯಂತ್ರಗಳನ್ನು ವಶಪಡಿಸಿಕೊಂಡು ಅರಕೆರೆ ಪೊಲೀಸ್ ಠಾಣೆ ವಶದಲ್ಲಿರಿಸಿದ್ದಾರೆ.ಈ ಕುರಿತು ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.