ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿವಿಕೆ ಅಯ್ಯಂಗಾರ್ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ನಾಲ್ಕೈದು ಮಂಗಳಮುಖಿಯರು ಸಾರ್ವಜನಿಕರನ್ನು ತಡೆದು ಹಣ ಕೇಳಿದ್ದು, ಅವರು ಹಣ ನೀಡಲು ನಿರಾಕರಿಸಿದಾಗ, ನಡುರಸ್ತೆಯಲ್ಲಿ ಬಟ್ಟೆಬಿಚ್ಚಿ, ಕೈತಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅಸಭ್ಯ ವರ್ತನೆ ತೋರಿದ್ದಾರೆ. ಇದರ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಜತೆಗೆ ಅಂಗಡಿಯೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿಯೂ ದೃಶ್ಯ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳಮುಖಿಯರ ವಿರುದ್ಧ ಕ್ರಮ: ಬಿವಿಕೆ ಅಯ್ಯಂಗಾರ್, ಚಿಕ್ಕಪೇಟೆ, ಕಾಟನ್‌ಪೇಟೆ ಸೇರಿ ಕೆ.ಆರ್. ಮಾರುಕಟ್ಟೆಯ ಸುತ್ತಲಿನ ಸ್ಥಳಗಳಲ್ಲಿ ರಸ್ತೆಯಲ್ಲಿ ಓಡಾಡುವವರಿಗೆ ಮಂಗಳಮುಖಿಯರು ಇದೇ ರೀತಿ ಹಾವಳಿ ಕೊಡುತ್ತಿದ್ದಾರೆ. ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಕೊಟ್ಟಷ್ಟು ಹಣ ತೆಗೆದುಕೊಳ್ಳದೇ, ಇಷ್ಟೇ ಹಣ ಕೊಡಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ, ಹಣ ಕೊಡದಿದ್ದಾಗ ಅವರ ಪರ್ಸ್ ಕಸಿದು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಈ ಸಂಬಂಧ ಮಂಗಳಮುಖಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ.ಸಮಾರಂಭಗಳಿಗೆ ನುಗ್ಗುವ ಗ್ಯಾಂಗ್
ಗೃಹ ಪ್ರವೇಶ, ಮದುವೆ ಮನೆ, ಕಲ್ಯಾಣ ಮಂಟಪಗಳಿಗೆ ಮಂಗಳಮುಖಿಯರ ಸೋಗಿನಲ್ಲಿರುವ ಗುಂಪು ಏಕಾಏಕಿ ನುಗ್ಗಿ 5 ರಿಂದ 10 ಸಾವಿರದವರೆಗೂ ಹಣ ನೀಡುವಂತೆ ಬೇಡಿಕೆ ಇಡುತ್ತದೆ. ಗೃಹ ಪ್ರವೇಶದ ಮನೆಗಳಿಗೆ ಮತ್ತು ಮಧುಮಗ ಮತ್ತು ವರನ ಕೊಠಡಿಗೆ ಹೋಗಿ ಹಣ ಕೊಡುವಂತೆ ತೊಂದರೆ ನೀಡುತ್ತಾರೆ. ಒಂದು ವೇಳೆ ಅವರು ಕೇಳಿದಷ್ಟು ಹಣ ಕೊಡಲು ನಿರಾಕರಿಸಿದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಕನಿಷ್ಠ ಮೂರು ಸಾವಿರದವರೆಗೂ ಹಣ ಪಡೆದು ಮಂಗಳಮುಖಿಯರ ಗ್ಯಾಂಗ್ ಸ್ಥಳದಿಂದ ತೆರಳುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.