ಕುಣಿಗಲ್ : ಹಿಂದೂ ಧರ್ಮದ ವಿರುದ್ಧ ಅನ್ಯಕೋಮಿನ ವ್ಯಕ್ತಿ ಸುಳ್ಳು ಸುದ್ದಿಗಳನ್ನು ಯೂಟ್ಯೂಬ್ ಮುಖಾಂತರ ಹರಿಬಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣ ಆಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಹಾಗೂ ಹಲವು ಹಿಂದೂಪರ ಮುಖಂಡರು, ಕುಣಿಗಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿಪಿಐ ನವೀನ್ ಕುಮಾರ್ ಅವರಿಗೆ ದೂರು ನೀಡಿದರು.
ಯೂಟ್ಯೂಬ್ ಮೂಲಕ ಎಂ.ಡಿ. ಸಮೀರ್ ಎಂಬಾತ ಹಿಂದೂ ಧರ್ಮ ಹಾಗೂ ಧರ್ಮಸ್ಥಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಿಬಿಟ್ಟಿರುವುದು ಧರ್ಮಸ್ಥಳ ಶ್ರದ್ಧಾಕೇಂದ್ರಕ್ಕೆ ನಡೆದುಕೊಳ್ಳುವ ಲಕ್ಷಾಂತರ ಹಿಂದೂಗಳ ಮನಸ್ಸಿಗೆ ನೋವಾಗಿದೆ, ಇಂತಹ ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣವಾಗಿರುವ ಈ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಬಲರಾಮ ಮಾತನಾಡಿ, ಹಿಂದೂ ಧರ್ಮದ ಮೇಲೆ ಅನ್ಯ ಧರ್ಮೀಯರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ, ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಸರ್ಕಾರ ಸಹಕಾರ ಮಾಡುತ್ತಿರುವುದು ಖಂಡನೀಯ. ಎಲ್ಲಾ ಧರ್ಮದ ವ್ಯಕ್ತಿಗಳು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ, ಆದರೆ ಕೇವಲ ಎಡಪಂಥೀಯರ ಪರ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿರುವುದು ಸರಿಯಲ್ಲ. ಹಿಂದೂ ಧರ್ಮದ ಭಾವನೆಗೆ ಧಕ್ಕೆ ತಂದಿರುವ ಸಮೀರನನ್ನು ಬಂಧಿಸಿ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ದಿಲೀಪ್ ಮಾತನಾಡಿ, ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ನಿರಂತರ ದಬ್ಬಾಳಿಕೆ ಹಾಗೂ ಅಪಪ್ರಚಾರ ನಡೆಯುತ್ತಿದೆ. ಈ ಹಿಂದೆ ಹಲವಾರು ಕ್ಷೇತ್ರಗಳ ಮೇಲೆ ಇಂತಹ ಪ್ರಕರಣಗಳು ನಡೆದ ಉದಾರಣೆಗಳಿವೆ, ಈಗ ಧರ್ಮಸ್ಥಳದ ಮೇಲೆ ಈ ಹಿಂದೂ ವಿರೋಧಿಗಳ ಕಣ್ಣು ಬಿದ್ದಿದೆ, ಇವರನ್ನು ನಿಯಂತ್ರಣ ಮಾಡಬೇಕಾದ ಸರ್ಕಾರವು ಅವರ ಪರ ಕೆಲಸ ಮಾಡುತ್ತಿದ್ದು, ಹಿಂದೂಗಳು ಜಾಗೃತರಾಗಬೇಕು ಎಂದು ಎಚ್ಚರಿಸಿದರು.
ಜೈನ ಮುಖಂಡ ಸಂತೋಷ್ ಮಾತನಾಡಿ, ಧರ್ಮಸ್ಥಳದಲ್ಲಿ ಮಂಜುನಾಥ ದೇವರು ಇರುವುದು ಸತ್ಯ. ಅದೇ ರೀತಿ ಜೈನ ಧರ್ಮದವರು ಮಂಜುನಾಥನನ್ನು ಆರಾಧಿಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಜೈನ, ಲಿಂಗಾಯತ ಸೇರಿ ಎಲ್ಲಾ ಧರ್ಮಗಳು ಕೂಡ ಒಟ್ಟಾಗಿರುವಂಥ ಸನಾತನ ಧರ್ಮವಾಗಿದೆ. ಅದರಂತೆ ಎಲ್ಲರೂ ಕೂಡ ನೆಮ್ಮದಿಯ ಬದುಕು ಸಾಗಿಸುತ್ತಿದ್ದರೆ ಇಂತಹ ಹಲವಾರು ಧರ್ಮಾಂಧರು ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.