ಕನ್ನಡಪ್ರಭ ವಾರ್ತೆ ಕನಕಪುರ
ದೂರಿನ ಆಧಾರದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕಚೇರಿ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ರೀತಿ ಅಕ್ರಮ ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂಬುದಾಗಿ ಉತ್ತರವನ್ನು ಉಪನಿರ್ದೇಶಕರಿಗೆ ಸಲ್ಲಿಸಿದ್ದರು. ಆದರೆ ಶ್ರೀರಾಮ ಸೇನೆಯ ದೂರಿನ ಪ್ರಮುಖ ಉದ್ದೇಶವೇ ಸಂಬಂಧಪಟ್ಟ ಕಡತಗಳು, ದಾಖಲೆ ಹಾಗೂ ಕಚೇರಿ ವ್ಯವಹಾರ ಗಳನ್ನು ಪರಿಶೀಲಿಸಿ ವಾಸ್ತವಾಂಶ ಪತ್ತೆಹಚ್ಚುವುದು ಆಗಿತ್ತು. ಆದರೆ ಕಡತ ಮತ್ತು ದಾಖಲೆಗಳನ್ನು ಸಮಗ್ರ ವಾಗಿ ಪರಿಶೀಲಿಸದೆ, ಕೇವಲ ಆರೋಪಕ್ಕೆ ಒಳಗಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ವಿವರಣೆ ಪಡೆದು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಚಿಸಿ ದೂರು ಮುಕ್ತಾಯಗೊಳಿಸಿರುವ ಕ್ರಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ದೂರಿನಲ್ಲಿರುವ ಆರೋಪಗಳ ಕುರಿತು ಮತ್ತೊಮ್ಮೆ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಸಂಬಂಧಪಟ್ಟ ಸಂಪೂರ್ಣ ಕಡತ ಮತ್ತು ದಾಖಲೆ ಪರಿಶೀಲಿಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರಿಗೆ COMPT/UPLOK/ BD/16809/2026 ಪ್ರಕರಣ ಸಂಖ್ಯೆ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ಶ್ರೀರಾಮ ಸೇನಾ ದಕ್ಷಿಣ ಪ್ರಾಂತ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರ್ಜುನ ಗೌಡ ತಿಳಿಸಿದ್ದಾರೆ.