ಕನ್ನಡಪ್ರಭ ವಾರ್ತೆ ದಾವಣಗೆರೆ
ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಸರಿಯಾಗಿ ಸಾಲ ಸಿಗುತ್ತಿಲ್ಲವೆಂಬ ದೂರು ಹೆಚ್ಚುತ್ತಿದ್ದು, ಪ್ರತಿ 15 ದಿನಕ್ಕೊಮ್ಮೆ ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳ ಮೂಲಕ ಶೈಕ್ಷಣಿಕ ಸಾಲದ ಬಗ್ಗೆ ಅರಿವು ಮೂಡಿಸುವ ಕೆಲಸ ಸಹ ಬ್ಯಾಂಕ್ ಅಧಿಕಾರಿಗಳಿಂದ ಆಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಲೀಡ್ ಬ್ಯಾಂಕ್ ಸೇರಿ ಇತರೆ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲವೆಂದರೆ ಏನರ್ಥ? ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ವಿಮರ್ಶೆ ಮಾಡಿಕೊಳ್ಳಲಿ. ಇನ್ನು ಮುಂದೆ ಇಂಥಹ ದೂರು ಮರುಕಳಿಸದಂತೆ ಶೈಕ್ಷಣಿಕ ಸಾಲ ಒದಗಿಸುವ ಕೆಲಸ ಆಗಲಿ ಎಂದರು.
ಒಬ್ಬ ಬಡ ಆಟೋ ಚಾಲಕ ತಮ್ಮ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಭಿಕ್ಷೆ ಪಾತ್ರಿ ಹಿಡಿದು ತಿರುಗಾಡಬೇಕಾಗಿದೆ. ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲ ಸಿಗದಿದ್ದರೆ ಇಂಥಹ ಪ್ರಕರಣ ಬರುತ್ತವೆ. ನಿತ್ಯವೂ ಸಾಕಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಬಡ ಪಾಲಕರು ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಸಿಗುತ್ತಿಲ್ಲವೆಂದು ತಮ್ಮ ಮನೆಗೆ ಬಂದು ದೂರುತ್ತಾರೆ. ಇನ್ನು ಮುಂದೆ ಇದೆಲ್ಲಾ ಮರುಕಳಿಸಬಾರದು ಎಂದು ಎಚ್ಚರಿಸಿದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಶೈಲಾ ಕೆ.ಮುರಾರಿ ಮಾತನಾಡಿ, ಕೃಷಿ ಇತರೆ ಕ್ಷೇತ್ರಗಳಲ್ಲಿ ಗುರಿ ಮೀರಿ ಸಾಧನೆಯಾಗಿದೆ. ಆದರೆ, ಶಿಕ್ಷಣ, ಮನೆ ನಿರ್ಮಾಣ ಸಾಲ ನೀಡಿಕೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಸಾಧ್ಯವಾಗಿಲ್ಲ ಎಂದು ಸಂಸದರ ಗಮನಕ್ಕೆ ತಂದರು. ಅದಕ್ಕೆ ಕೆನರಾ ಬ್ಯಾಂಕ್ ಅಧಿಕಾರಿ ಮಾತನಾಡಿ, ಕಳೆದ ವರ್ಷ 700 ವಿದ್ಯಾರ್ಥಿಗಳಿಗೆ, ಪ್ರಸಕ್ತ ಸಾಲಿನಲ್ಲಿ 105 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲಾಗಿದೆ. ನಿಬಂಧನೆಗಳನ್ನು ಪೂರೈಸದ ಕೆಲ ಅರ್ಜಿಗಳು ತಿರಸ್ಕೃತವಾಗಿದೆ ಎಂದು ಹೇಳಿದರು.
ಅದಕ್ಕೆ ಸಂಸದೆ ಡಾ.ಪ್ರಭಾ, ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಡಿಸಿಸಿ ಬ್ಯಾಂಕ್‌ನಿಂದ ನೀಡುವ ಬೆಳೆ ಸಾಲದ ಪ್ರಮಾಣವೂ ತೃಪ್ತಿಕರವಾಗಿಲ್ಲ. ಶೈಕ್ಷಣಿಕ ಸಾಲ ಸಿಗುತ್ತಿಲ್ಲವೆಂದು ಬಡ, ಮಧ್ಯಮ ವರ್ಗದ ಪಾಲಕರ ದೂರಾದರೆ, ಬೆಳೆ ಸಾಲ ಸಹ ಸರಿಯಾಗಿ ನೀಡುತ್ತಿಲ್ಲವೆಂದು ರೈತರಿಂದಲೂ ದೂರು ಕೇಳಿ ಬರುತ್ತಿವೆ. ಈ ಹಿನ್ನೆಲೆ ರಾಜ್ಯದ ಇತರೆ ಜಿಲ್ಲೆಗಳ ಶೈಕ್ಷಣಿಕ ಸಾಲ, ಬೆಳೆ ಸಾಲದ ಪ್ರಗತಿಯನ್ನು ಅಧ್ಯಯನ ಮಾಡಿ, ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ಆದೇಶಿಸಿದರು.ಡಿಸಿಸಿ ಬ್ಯಾಂಕ್ ಸಿಇಒ ನಂಜುಂಡೇಗೌಡ ಮಾತನಾಡಿ, 2021ರಲ್ಲಿ ₹512 ಕೋಟಿ, 2022ರಲ್ಲಿ ₹612 ಕೋಟಿ, 2022ರಲ್ಲಿ ₹838 ಹಾಗೂ 2024ರಲ್ಲಿ ₹840 ಕೋಟಿ ಸಾಲ ನೀಡಿದೆ. ಆದರೆ, ರೈತರ ಬೇಡಿಕೆಗೆ ತಕ್ಕಂತೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ನಬಾರ್ಡ್, ಅಪೆಕ್ಸ್ ಬ್ಯಾಂಕ್‌ಗಳಿಂದ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಇದರಿಂದಾಗಿ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಠೇವಣಿ ಹೆಚ್ಚಿಸಿಕೊಂಡು, ಸಾಲ ನೀಡಿದೆ ಪ್ರಮಾಣ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಸಾಲಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲನೆ ನೆಪದಲ್ಲಿ ಯಾವುದೇ ಬ್ಯಾಂಕ್ ದೀರ್ಘ ಸಮಯ ಇಟ್ಟುಕೊಳ್ಳದೇ, ಕಾಲ ಮಿತಿಯಲ್ಲಿ ವಿಲೇ ಮಾಡಬೇಕು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹ ರೈತರಿಗೆ ಬೆಳೆ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಬೇಕು. ಸಕಾರಣವಿಲ್ಲದೇ ಸಾಲದ ಅರ್ಜಿ ತಿರಸ್ಕರಿಸಬಾರದು. ಸಾಲ ನೀಡಿಕೆಗೆ ಸಿಬಿಲ್ ಸ್ಕೋರ್ ಅಷ್ಟೇ ಮಾನದಂಡವಾಗಬಾರದು. ಮುಂದಿನ ಸಭೆ ಹೊತ್ತಿಗೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಇನ್‌ಫುಟ್ ಸಬ್ಸಿಡಿ ಹಣವನ್ನು ಸಾಲಕ್ಕೆ ಕಟಾವಣೆ ಮಾಡಬಾರದು. ಈ ಬಗ್ಗೆ ಸಾಕಷ್ಟು ಸಲ ಹೇಳಿದರೂ ಕೆಲ ಬ್ಯಾಂಕ್‌ನವರು ಅದೇ ಚಾಳಿ ಮುಂದುವರಿಸುತ್ತಿದ್ದಾರೆ. ಈ ಬಗ್ಗೆ ಕುಂದು ಕೊರತೆ ಸಭೆಯಲ್ಲಿ ಸಚಿವರು, ಶಾಸಕರಿಗೂ ದೂರು ಬಂದಿವೆ. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ, ಅಂಗವಿಕಲರ ಪಿಂಚಣಿ ಸೇರಿ ಯಾವುದೇ ಇನ್‌ಫುಟ್ ಸಬ್ಸಿಡಿ ಹಣವನ್ನು ಸಾಲಕ್ಕೆ ಜಮಾ ಮಾಡಬಾರದು. ತಾಂತ್ರಿಕವಾಗಿ ಒಂದು ವೇಳೆ ಜಮಾವಣೆಯಾಗಿದ್ದರೆ ಆ ಹಣವನ್ನು ಮರಳಿ ಫಲಾನುಭವಿ ಉಳಿತಾಯ ಖಾತೆಗೆ ಜಮಾ ಮಾಡಬೇಕು ಎಂದರು.
ನಬಾರ್ಡ್ ಅಧಿಕಾರಿ ರಶ್ಮಿ ರೇಖಾ, ಆರ್‌ಬಿಐ ಅಧಿಕಾರಿ ವೆಂಕಟರಾಮಯ್ಯ, ಜಿಪಂ ಯೋಜನಾಧಿಕಾರಿ ಕೃಷ್ಣನಾಯ್ಕ ಸೇರಿದಂತೆ ವಿವಿಧ ಬ್ಯಾಂಕ್ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.