ರಾಜ್ಯದಲ್ಲಿ ಸದ್ಯ 3033 ಕೇಸ್‌ಗಳು ಪೆಂಡಿಂಗ್ । 6 ತಿಂಗಳಲ್ಲಿ 5021 ಪ್ರಕರಣಗಳು ಇತ್ಯರ್ಥ। ಸುದ್ದಿಗೋಷ್ಠಿಯಲ್ಲಿ ಆಯೋಗದ ರಾಜ್ಯಾಧ್ಯಕ್ಷ ಡಾ. ಶ್ಯಾಮ್ ಭಟ್ ಮಾಹಿತಿ
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕಳೆದ 6 ತಿಂಗಳಲ್ಲಿ 5021 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಎಂದು ಆಯೋಗದ ರಾಜ್ಯಾಧ್ಯಕ್ಷ (ಪ್ರಭಾರಿ) ಡಾ. ಶ್ಯಾಮ್ ಭಟ್ ಹೇಳಿದರು.
ಜಿಲ್ಲಾ ಪ್ರವಾಸದ ಹಿನ್ನಲೆಯಲ್ಲಿ ಗುರುವಾರ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆ, ವಿದ್ಯಾರ್ಥಿನಿಲಯ, ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023ರ ನವೆಂಬರ್ ಮಾಹೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೊಸ ಸಮಿತಿ ರಚನೆಯಾಗಿದ್ದು, ಆಗ ಆಯೋಗದ ಮುಂದೆ 8054 ಪ್ರಕರಣಗಳು ಇದ್ದವು. ಕಳೆದ 6 ತಿಂಗಳಲ್ಲಿ 5021 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು 3033 ಕೇಸ್‌ಗಳು ಬಾಕಿ ಇವೆ. ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲಾ ಕೇಂದ್ರದಲ್ಲಿ ದೂರುದಾರರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯಕ್ರಮ ರೂಪಿಸಿದೆ. ಈವರೆಗೆ 8 ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.
ಜನರ ಹಕ್ಕಿಗೆ ಯಾವುದೇ ರೀತಿಯಲ್ಲಾದರೂ ತೊಂದರೆಯಾದಲ್ಲಿ ಆಯೋಗ ದೂರು ಸ್ವೀಕರಿಸಲಿದೆ. ಕೆಲವು ಪ್ರಕರಣ ಗಳಲ್ಲಿ ಸೋಮೋಟೋ ಕೇಸ್‌ಗಳನ್ನು ದಾಖಲಿಸಿಕೊಂಡು ಇಲಾಖೆಗಳ ಗಮನ ಸೆಳೆಯಲಾಗಿದೆ. ಆಯೋಗಕ್ಕೆ ಪ್ರತಿದಿನ 30-40 ದೂರುಗಳು ಬರುತ್ತಿವೆ. ಹಾಗಾಗಿ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ವೇಗದಲ್ಲಿ ಇತ್ಯರ್ಥಪಡಿಸುವ ಕೆಲಸ ಸಹ ನಡೆಯುತ್ತಿದೆ ಎಂದರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಲಾಗಿದ್ದು, ಕೆಲವೆಡೆ ನ್ಯೂನ್ಯತೆಗಳು ಕಂಡು ಬಂದಿತು. ಸರ್ವರ್ ತೊಂದರೆ ಯಿಂದಾಗಿ ಓಪಿಡಿಯಲ್ಲಿ ಜನರು ಚೀಟಿ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಆ ಭಾಗದಲ್ಲಿ ಸ್ಥಳದ ಅಭಾವ ಕಂಡು ಬರುತ್ತಿತ್ತು. ಜತೆಗೆ ಹೆಚ್ಚುವರಿಯಾಗಿ ಕಂಪ್ಯೂಟರ್ ಆಪರೇಟರ್ ಹಾಕಲು ಜಿಲ್ಲಾ ಸರ್ಜನ್ ಒಪ್ಪಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾರಾಗೃಹದ ನಿರ್ವಹಣೆ ಉತ್ತಮವಾಗಿದೆ. ಕ್ಲಿನಿಂಗ್ ಮತ್ತು ಗಾರ್ಡನ್ ಚೆನ್ನಾಗಿದೆ. ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾ ಭ್ಯಾಸ ಮಾಡಿಸಲು ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇದೆಲ್ಲಾ ಪ್ರಶಂಸನೀಯವಾದುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಯೋಗದ ಕಾರ್ಯದರ್ಶಿ ಸುರೇಶ್ ಒಂಟಿಗೋಡು, ದಿನೇಶ್ ಸಂಪತ್‌ರಾಜ್ ಇದ್ದರು. 27 ಕೆಸಿಕೆಎಂ 5ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಶ್ಯಾಮ್ ಭಟ್, ಕಾರ್ಯದರ್ಶಿ ಸುರೇಶ್ ಒಂಟಿಗೋಡು, ದಿನೇಶ್ ಸಂಪತ್‌ರಾಜ್ ಗುರುವಾರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು.