ಕನ್ನಡಪ್ರಭ ವಾರ್ತೆ ಮಂಡ್ಯ
ಗೃಹರಕ್ಷಕ ದಳದ ವಿರುದ್ಧ ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಾ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಸಮಾದೇಷ್ಟ ಡಿ.ವಿನೋದ್ ಖನ್ನಾ ಆರೋಪಿಸಿದ್ದಾರೆ.ಗೃಹರಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿದ್ದ ಜ್ಯೋತಿ, ಅಭಿನಯ ಅವರು ನಿಯಮಬಾಹಿರ ವರ್ತನೆಯ ಆರೋಪದ ಮೇಲೆ ವಜಾಗೊಂಡಿದ್ದಾರೆ. ಇವರು ವಿಶ್ವ ದಲಿತ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಪೂರ್ಣಚಂದ್ರ ಅವರ ಜೊತೆಗೂಡಿ ಸಂಸ್ಥೆಯ ಹೆಸರಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮೂರು ವರ್ಷದ ಹಿಂದಿನ ಹಳೆಯ ವಿಡಿಯೋ ತುಣುಕುಗಳನ್ನು ಮಿಶ್ರಣ ಮಾಡಿ ದೃಶ್ಯ ಮಾಧ್ಯಮ, ಪತ್ರಿಕೆಗಳಿಗೆ ನೀಡಿ ಗೃಹರಕ್ಷಕ ದಳದ ಅಧಿಕಾರಿಗಳಿಗೆ ಮಾನಹಾನಿ ಉಂಟುಮಾಡಿದ್ದಾರೆ. ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ತುಣುಕುಗಳು ೩.೩.೨೦೨೧ರಿಂದ ೧೨.೦೩.೨೦೨೧ರವರೆಗೆ ಪಾಂಡವಪುರದಲ್ಲಿ ಏರ್ಪಡಿಸಿದ್ದ ತರಬೇತಿ ಸಮಯದಲ್ಲಿ ನಡೆದ ಮನೋರಂಜನಾ ಕಾರ್ಯಕ್ರಮದ ತುಣುಕಾಗಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಶುಭ ಸಮಾರಂಭದ ಫೋಟೋಗಳನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಿಕೊಂಡು ಅಪಪ್ರಚಾರಕ್ಕೆ ಬಳಸಿ ಕಚೇರಿಯಲ್ಲಿ ಮಾಡಿದ ಹುಟ್ಟುಹಬ್ಬ ಎಂದು ಬಿಂಬಿಸುವ ಯತ್ನ ಮಾಡಿದ್ದಾರೆ ಎಂದು ದೂರಿದರು.
ಗೃಹರಕ್ಷಕ ದಳಕ್ಕೆ ರಾಜ್ಯದಲ್ಲಿ ಉತ್ತಮ ಹೆಸರಿದ್ದು, ಅದಕ್ಕೆ ಕಳಂಕ ತರಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.೫೦ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ
ಕನ್ನಡಪ್ರಭ ವಾರ್ತೆ ಮಂಡ್ಯಕ್ಯಾಂಟರ್ವೊಂದರಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಪೂರ್ವಠಾಣೆ ಪೊಲೀಸರು ೧,೫೨,೭೦ ರು. ಮೌಲ್ಯದ ೫೦.೬೯ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಕ್ಯಾಂಟರ್‌ನಲ್ಲಿ ಅಕ್ಕಿ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ನಗರದ ಅಗ್ನಿಶಾಮಕ ಠಾಣೆ ಬಳಿ ನಿಂತಿದ್ದ ಕ್ಯಾಂಟರ್ (ಕೆಎ ೦೨-೬೫೨೮) ಬಳಿ ತೆರಳಿ ಪರಿಶೀಲಿಸಿದಾಗ ವಿವಿಧ ಬಣ್ಣದ ವಿವಿಧ ತೂಕದ ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ಇದ್ದು ಸ್ಥಳದಲ್ಲಿ ವಾಹನದ ಚಾಲಕ ಇರಲಿಲ್ಲವೆಂದು ಕಂಡುಬಂದಿದೆ. ವಾಹನವನ್ನು ಆರ್‌ಎಪಿಸಿಎಂಎಸ್ ಗೋದಾಮಿಗೆ ತಂದು ತೂಕ ಮಾಡಿದಾಗ ೧೫೨ ಪ್ಲಾಸ್ಟಿಕ್ ಚೀಲಗಳಲ್ಲಿ ೫೦.೬೯ ಕೆಜಿ ಅಕ್ಕಿ ಇರುವುದು ಕಂಡುಬಂದಿದೆ. ಕ್ಯಾಂಟರ್‌ನ್ನು ವಶಪಡಿಸಿಕೊಂಡಿರುವ ಪೊಲೀಸರು ಆಹಾರ ನಿರೀಕ್ಷಕ ಬಿ.ವಿ.ರೇವಣ್ಣ ನೀಡಿದ ದೂರಿನ ಆಧಾರದ ಮೇಲೆ ಕ್ಯಾಂಟರ್ ಮಾಲೀಕ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.