ಸರ್ಕಾರಿ ಭೂಮಿ ಒತ್ತುವರಿ, ಬಸ್ ನಿಲ್ದಾಣ ಸ್ಥಳಾಂತರಕ್ಕೆ ಹುನ್ನಾರ ಖಂಡಿಸಿ ತಹಸೀಲ್ದಾರ್‌ಗೆ ದೂರು

KannadaprabhaNewsNetwork |  
Published : Oct 02, 2024, 01:06 AM IST
1ಕೆಎಂಎನ್ ಡಿ14 | Kannada Prabha

ಸಾರಾಂಶ

ಸರ್ವೆ ನಂ.105ರ 30 ಗುಂಟೆ ಬಂಡಿರಸ್ತೆ ಇದ್ದು, ಒತ್ತುವರಿ ಮಾಡಿಕೊಂಡು ರೈತರು ಜಮೀನಿಗೆ ತೆರಳದಂತೆ ಕಾಂಪೌಂಡ್ ನಿರ್ಮಿಸಿದ್ದಾರೆ. ಇದರಿಂದ ರೈತರು ಸುಮಾರು 8 ರಿಂದ 10 ಕಿಮೀ ಬಳಸಿ ತಮ್ಮ ಜಮೀನುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಜುವಾರಿ ಗಾರ್ಡನ್ ಸಿಟಿ ಕಂಪನಿಯವರು ಸರ್ಕಾರಿ ಜಮೀನನ್ನು ಒತ್ತುವರಿ ಜೊತೆಗೆ ನೂರಾರು ವರ್ಷಗಳಿಂದ ಇದ್ದ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಗ್ರಾಮಸ್ಥರು ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರಿಗೆ ದೂರು ನೀಡಿ ಗ್ರಾಪಂ ವ್ಯಾಪ್ತಿಗೆ ಬರುವ ಜುವಾರಿ ಡೆವಲೆಪರ್ಸ್ ಅವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬಂಡಿದಾರಿಯನ್ನು ಆಕ್ರಮಿಸಿಕೊಂಡು ರೈತರಿಗೆ ತಿರುಗಾಡಲು ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದರು.

ಸುಮಾರು 70 ಎಕರೆ 6 ಗುಂಟೆ ಪ್ರದೇಶವನ್ನು ಗುಂಪು ವಸತಿ ನಿರ್ಮಿಸಲು ಉದ್ದೇಶಿತ ಅಭಿವೃದ್ಧಿ ನಕ್ಷೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಡಾವಳಿಯಂತೆ ಅನುಮತಿ ಪಡೆದು ಇದರಲ್ಲಿ ಶೇ.10 ರಷ್ಟು ಪ್ರದೇಶವನ್ನು ನಾಗರೀಕ ಸೌಕರ್ಯ ನಿವೇಶನಕ್ಕಾಗಿ ಹಾಗೂ ಉದ್ಯಾನವನಕ್ಕಾಗಿ ಶೇ.15.03ರು ಉದ್ದೇಶಿಸಿ ಉಳಿಕೆ ಪ್ರದೇಶದಲ್ಲಿ ಗುಂಪು ವಸತಿ ನಿರ್ಮಿಸಲು ಉದ್ಧೇಶಿತ ಅಭಿವೃದ್ಧಿ ನಕ್ಷೆ ಸಲ್ಲಿಸಿದ್ದಾರೆ. ಆದರೆ, ಸಿಎ 1 ಸರ್ವೆ ನಂ.176ರಲ್ಲಿ ಅತಿಕ್ರಮ ಮಾಡಿ 20 ಗುಂಟೆ ಜಮೀನಿನ ಬೆಟ್ಟ ಕೊರೆದು ಟ್ಯಾಂಕ್ ಅಳವಡಿಸಿದ್ದಾರೆ ಎಂದು ಆರೋಪಿಸಿದರು.

ಸರ್ವೆ ನಂ.105ರ 30 ಗುಂಟೆ ಬಂಡಿರಸ್ತೆ ಇದ್ದು, ಒತ್ತುವರಿ ಮಾಡಿಕೊಂಡು ರೈತರು ಜಮೀನಿಗೆ ತೆರಳದಂತೆ ಕಾಂಪೌಂಡ್ ನಿರ್ಮಿಸಿದ್ದಾರೆ. ಇದರಿಂದ ರೈತರು ಸುಮಾರು 8 ರಿಂದ 10 ಕಿಮೀ ಬಳಸಿ ತಮ್ಮ ಜಮೀನುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೊತೆಗೆ ಸರ್ವೆ ನಂ.147ರಲ್ಲಿ 24 ಗುಂಟೆ ಸರ್ಕಾರಿ ಜಾಗದಲ್ಲಿ ಕಂಪನಿಯವರು ಈಜುಕೊಳ ಮಾಡಿಕೊಂಡು ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದಾರೆ. ಈಗ ನೂರಾರು ವರ್ಷಗಳಿಂದ ಇರುವ ಹುಲಿಕೆರೆ ಬಸ್ ನಿಲ್ದಾಣವನ್ನು ಜುವಾರಿಯವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆದೇಶದಂತೆ ನವೀಕರಿಸುತ್ತಿದ್ದೇವೆ ಎಂದು ಹೇಳಿ ಸಿಎ ಪ್ರದೇಶದಲ್ಲಿ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಎಂಎನ್‌ಪಿಎಂ ಕಾಲೋನಿ ನಿವಾಸಿಗಳಿಗೆ ತೊಂದರೆಯಾಗುವ ರೀತಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಿಸಿ, ಮಳೆ ಹಾಗೂ ಚರಂಡಿ ನೀರು ಕಾಲೋನಿಗೆ ನುಗ್ಗಿ ಅವಾಂತರ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂದ ಗ್ರಾಪಂನಿಂದ ಹಲವು ಬಾರಿ ನೋಟಿಸ್ ನೀಡಿದ್ದರೂ ಕಂಪನಿಯವರು ಸೊಪ್ಪು ಹಾಕುತ್ತಿಲ್ಲ. ಕೂಡಲೇ ಮೈಸೂರು ನಗರಾಭಿವೃದ್ಧಿ ಹಾಗೂ ತಾವು ಜಂಟಿ ಸರ್ವೆ ನಡೆಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹುಲಿಕೆರೆ ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ.ಚಲುವರಾಜು, ಸದಸ್ಯ ರಾಮು, ಮಾಜಿ ಸದಸ್ಯೆ ರೇಷ್ಮಭಾನು, ಮುಖಂಡರಾದ ಕುಂಟೇಗೌಡ, ಕೃಷ್ಣ, ಉಮೇಶ, ಗಣೇಶ, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!