ಕನ್ನಡಪ್ರಭ ವಾರ್ತೆ ಹಾಸನಪ್ರೀತಂ ಗೌಡ ಅವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರಬಹುದು. ಆದರೆ ಅವರ ನಡೆ-ನುಡಿ, ವರ್ತನೆ ಹಾಗೂ ರಾಜಕೀಯ ಕಾರ್ಯವೈಖರಿಯಲ್ಲಿ ಕಂಡುಬರುವ ಗಂಭೀರ ನ್ಯೂನ್ಯತೆಗಳ ಬಗ್ಗೆ ಈಗಾಗಲೇ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪ್ರೀತಂ ಗೌಡ ಎಷ್ಟು ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ? ಅವರು ಕೈಹಾಕಿರುವ ಗಂಭೀರ ಕೃತ್ಯಗಳು ಯಾವುವು? ಅವರಿಂದ ಎಷ್ಟು ಮನೆಗಳು ಹಾಳಾಗಿವೆ? ಯಾರ್ಯಾರ ಮನೆಗಳಿಗೆ ಅನ್ಯಾಯವಾಗಿದೆ? ರಾಜಕಾರಣದಲ್ಲಿ ಅವರು ಯೋಗ್ಯರೋ, ಅಯೋಗ್ಯರೋ ಎಂಬುದನ್ನು ವಿವರಿಸಿ ದಾಖಲೆ ಸಮೇತ ಪಕ್ಷದ ಉನ್ನತ ನಾಯಕರಿಗೆ ಪತ್ರ ಬರೆಯಲಾಗಿದೆ. ಇದರಲ್ಲಿ ನನಗೆ ಯಾವುದೇ ಭಯವಿಲ್ಲ. ನಾನು ಮಾಧ್ಯಮದಲ್ಲಿ ಬಿಲ್ಡಪ್ ತೆಗೆದುಕೊಳ್ಳಲು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ಹಿಂದೆ ಪ್ರಜ್ವಲ್ ರೇವಣ್ಣ ಕುರಿತು ಕೂಡ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಪತ್ರ ಬರೆದಿದ್ದೇನೆ. ಯೋಗ್ಯತೆ ಕಳೆದುಕೊಂಡ ವ್ಯಕ್ತಿಗಳಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡಿದರೆ, ಕೊನೆಗೆ ಪಕ್ಷವೇ ತಲೆಬಾಗಬೇಕಾಗುತ್ತದೆ ಎಂದು ಆಗಲೇ ಎಚ್ಚರಿಸಿದ್ದೆ. ಆದರೆ ಆ ವೇಳೆ ನನ್ನ ಮಾತನ್ನು ಪರಿಗಣಿಸಲಿಲ್ಲ. ಈಗ ಅದರ ಪರಿಣಾಮ ಎಲ್ಲರಿಗೂ ಕಾಣಿಸಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಪ್ರೀತಂ ಗೌಡ ಅವರಿಗೆ ಪಕ್ಷದಿಂದ ಯಾವುದೇ ಹುದ್ದೆ ಅಥವಾ ಜವಾಬ್ದಾರಿ ನೀಡಿದರೆ, ಪಕ್ಷ ಯಾವ ರೀತಿ ಹೀನಾಯ ಸ್ಥಿತಿಗೆ ಹೋಗಬಹುದು ಎಂಬುದನ್ನು ದಾಖಲೆಗಳೊಂದಿಗೆ ವಿವರಿಸಿ ಪಕ್ಷಕ್ಕೆ ನೀಡಿದ್ದೇನೆ ಎಂದು ದೇವರಾಜೇಗೌಡ ತಿಳಿಸಿದರು.ಎಷ್ಟು ಕೋಟಿ ರುಪಾಯಿ ಹಣದ ವ್ಯವಹಾರಗಳಲ್ಲಿ ತೊಡಗಿದ್ದಾರೆ, ಯಾವ ಯಾವ ಮನೆಗಳಿಗೆ ಅನ್ಯಾಯವಾಗಿದೆ, ಸ್ವಪಕ್ಷದಲ್ಲೇ ಎಷ್ಟು ಕಾರ್ಯಕರ್ತರನ್ನು ಮುಳುಗಿಸುತ್ತಿದ್ದಾರೆ, ಕೇವಲ ಹಾಸನ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕದ ಯಾವ ಯಾವ ರಾಜಕಾರಣಿಗಳನ್ನು ಅಡ್ಡಗಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನೂ ದಾಖಲೆಗಳೊಂದಿಗೆ ನೀಡಲಾಗಿದೆ ಎಂದರು.ಸಂದರ್ಭ ಬಂದಾಗ ಈ ಎಲ್ಲಾ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಹಾಸನ ಜಿಲ್ಲೆಯಲ್ಲಿ ನಡೆದಿರುವ ಹಣಕಾಸು ವ್ಯವಹಾರಗಳ ವಿವರಗಳನ್ನೂ ಸ್ವಪಕ್ಷನಾಗಿ ನಾನೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ಪ್ರೀತಂ ಗೌಡ ಇನ್ನೂ ಪಕ್ಷದಲ್ಲಿ ಕೆಲ ದಿನಗಳಲ್ಲಿ ಇದ್ದರೆ, ಇನ್ನು ಹತ್ತು ಪಟ್ಟು ಹೆಚ್ಚು ಭ್ರಷ್ಟನಾಗುವ ಸಾಧ್ಯತೆ ಇದೆ. ಎಲ್ಲ ಹಣವನ್ನು ಲಂಚವಾಗಿ ಪಡೆದಿದ್ದರೆ, ಆ ಹಣ ಯಾವ ಖಾತೆಗೆ ಹೋಗಿದೆ ಎಂಬ ದಾಖಲೆಗಳನ್ನೂ ಬಿಡುಗಡೆ ಮಾಡುತ್ತೇನೆ ಕಾದು ನೋಡಿ ಎಂದು ದೇವರಾಜೇಗೌಡ ಸವಾಲು ಹಾಕಿದರು. ಈ ಎಲ್ಲಾ ವಿಷಯಗಳನ್ನು ಪಕ್ಷದ ಹಿತದೃಷ್ಟಿಯಿಂದಲೇ ಉನ್ನತ ನಾಯಕತ್ವದ ಗಮನಕ್ಕೆ ತಂದಿದ್ದೇನೆ.