- ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಪ್ರಗತಿ ಹಂತದಲ್ಲಿರುವ ಎಲ್ಲ ಕಾರ್ಯಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಹೇಳಿದರು.ಶುಕ್ರವಾರ ಇಲ್ಲಿನ ತಾಲೂಕು ಆಡಳಿತ ಸೌಧದ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಎಲ್ಲ ಪಿಡಿಒಗಳು ಎಸ್.ಸಿ ಮತ್ತು ಎಸ್.ಟಿ. ಗಳಿಗೆ ಶೇ. 25 ಅನುದಾನದಲ್ಲಿ ಖರ್ಚು ಮಾಡಿದ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು. ಬರಗಾಲದ ಪರಿಸ್ಥಿತಿ ಉಂಟಾಗುವುದರಿಂದ ತಾಲೂಕಿನ ಎಲ್ಲ ಗ್ರಾಪಂಗಳಿಗೆ ವ್ಯವಸ್ಥಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಗ್ರಾಪಂಗಳಿಗೆ ಭೇಟಿ ನೀಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಕೆರೆ, ಹಳ್ಳಗಳ ನೀರನ್ನು ಪರಿಶೀಲಿಸಬೇಕು. ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಎಲ್ಲೆಡೆ ಕುಡಿಯುವ ನೀರಿನ ಅಭಾವ ಕಂಡುಬಂದಿದ್ದು, ನೀರನ್ನು ನಿಯಮಿತ ಮತ್ತು ಸುವ್ಯವಸ್ಥಿತವಾಗಿ ಸರಬರಾಜುಗೊಳಿಸಬೇಕು ಎಂದರು.
ತಾಪಂ ಇಒ ರಾಮಚಂದ್ರ ಹೊಸಮನಿ ಮಾತನಾಡಿದರು. ಈ ವೇಳೆ ಪಂಚಾಯತ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಕುರ್ತಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕರವೀರಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಪಾಟೀಲ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.