ಕೆ.ಆರ್.ಪೇಟೆ:
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಆತ್ಮಸ್ಥೈರ್ಯ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವು ಇರುತ್ತದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ತಿಳಿಸಿದರು.ತಾಲೂಕಿನ ಚಟ್ಟೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯರೊಂದಿಗೆ ಸಭೆ ನಡೆಸಿ ಮಾತನಾಡಿ, ಸಾರ್ವಜನಿಕರು ತಮ್ಮ ಮಕ್ಕಳನ್ನು ತಪ್ಪದೇ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣ ಮತ್ತು ಸವಲತ್ತುಗಳು ಖಾಸಗಿ ಶಾಲೆಗಳಲ್ಲಿಯೂ ದೊರೆಯುವುದಿಲ್ಲ. ಕೇವಲ ಆಂಗ್ಲ ಭಾಷ ವ್ಯಾಮೋಹಕ್ಕೆ ಒಳಗಾಗದೇ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ದಾಖಲಿಸಿದರೆ ಅವರಿಗೆ ಮುಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಶ್, ಗ್ರಾಪಂ ಸದಸ್ಯ ಉದೇಶ, ಮಾಜಿ ಸದಸ್ಯ ನಾಗರಾಜು, ಶಿಕ್ಷಕರಾದ ಮಂಗಳಗೌರಿ, ರವಿಕುಮಾರ್ ಕುಮಾರ್ ಸೇರಿದಂತೆ ಮುಖಂಡರು ಇದ್ದರು.
ನಾಳೆ ದೇವಸ್ಥಾನದಲ್ಲಿ ಕರಗ ಮಹೋತ್ಸವಹಲಗೂರು:
ಗುಂಡಾಪುರ ಸಮೀಪವಿರುವ ಶ್ರೀಬಾಲ್ಯ ಸತ್ಯ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ 13ನೇ ವರ್ಷದ ಕಾರ್ತಿಕ ಮಾಸದ ಅಂಗವಾಗಿ ನ.8ರ ಬೆಳಗ್ಗೆ 5ರಿಂದ ಗಣಪತಿ ಪೂಜೆ, ಮಲ್ಲಿಗೆ ಮೆಟ್ಟಲು ಶ್ರೀವೇದಬ್ರಹ್ಮ ನಟರಾಜಾರಾಧ್ಯರ ನೇತೃತ್ವದಲ್ಲಿ ನವಗ್ರಹ ಹೋಮ ಹಾಗೂ ಶ್ರೀಬಾಲ್ಯ ಸತ್ಯ ಶನೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಯುತ್ತದೆ.ಬೆಳಗ್ಗೆ 10.05ಕ್ಕೆ ಗುಡ್ಡಪ್ಪನವರಿಗೆ ಕಂಕಣ ಧಾರಣೆ, ನಂತರ ಹಾಲರವಿ ಸೇವೆ, ಶ್ರೀಶನೇಶ್ವರ ಸ್ವಾಮಿ ಮತ್ತು ಶ್ರೀಬಸಪ್ಪನವರ ಉತ್ಸವ, ನವಕರಗಗಳ ಉತ್ಸವ, ಭಕ್ತಾದಿಗಳಿಂದ ಎಳ್ಳು ಬತ್ತಿ, ಆರತಿ ಪೂಜೆ ಹಾಗೂ ಬಾಯಿ ಬೀಗ ನಡೆಸಲಾಗುತ್ತದೆ.
ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ, ನ.10ನೇ ಸೋಮವಾರ ಸಂಜೆ 6.30 ಗಂಟೆಗೆ ದಳವಾಯಿ ಕೋಡಿಹಳ್ಳಿ ಬನ್ನಿಮಂಟಪದಲ್ಲಿ ಶ್ರೀಬಸಪ್ಪ ದೇವರ ಪೂಜಾ ಕಾರ್ಯಕ್ರಮ ಮತ್ತು ಪ್ರಸಾದ ವಿನಿಯೋಗವಿದೆ.ದಳವಾಯಿ ಕೋಡಿಹಳ್ಳಿ, ಗುಂಡಾಪುರ, ಬಾಳೆಹೊನ್ನಿಗ, ದೇವಿರಹಳ್ಳಿ, ನಂದಿಪುರ, ಎಚ್.ಬಸಾಪುರ, ಹಗಾದೂರು, ಬಸವನಹಳ್ಳಿ, ಕೆಂಪಯ್ಯನ ದೊಡ್ಡಿ, ಹೊನ್ನಿಗನಹಳ್ಳಿ, ಹರಿಹರ, ಸಾಸಲಾಪುರ, ಕೆಂಪೇಗೌಡನ ದೊಡ್ಡಿ, ಲಿಂಗಪಟ್ಟಣ, ಹಲಗೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಅರ್ಚಕರಾದ ರಾಜು ಮನವಿ ಮಾಡಿದ್ದಾರೆ.
ಮುಕ್ತಾಯಗೊಂಡ ರಾಜಮುಡಿ ಬ್ರಹ್ಮೋತ್ಸವಮೇಲುಕೋಟೆ: ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವ ಗುರುವಾರ ಮುಕ್ತಾಯವಾಗಿದೆ. ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಜಿಲ್ಲಾ ಖಜಾನೆಗೆ ಮರಳಿಸಲಾಯಿತು. 9 ದಿನಗಳಿಂದ ನಡೆಯುತ್ತಿದ್ದ ರಾಜಮುಡಿ ಬ್ರಹ್ಮೋತ್ಸವದ ಅಂತಿಮ ಕಿರೀಟಧಾರಣ ಕಾರ್ಯಕ್ರಮ ಬುಧವಾರ ನಡೆದ ತೀರ್ಥಸ್ನಾನದ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಯಿತು. ಬ್ರಹ್ಮೋತ್ಸವದ ಅಷ್ಠತೀರ್ಥ ಮತ್ತು ತೊಟ್ಟಿಲಮಡು ಜಾತ್ರೆ ನಂತರದ ಶನಿವಾರ ಮತ್ತು ಭಾನುವಾರಗಳನ್ನು ಲಕ್ಷಾಂತರ ಭಕ್ತರು ಮೇಲುಕೋಟೆಗೆ ಆಗಮಿಸಿ ದರ್ಶನ ಪಡೆದರು.