ಶಿಗ್ಗಾಂವಿ: ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು. ಅಪಘಾತವೊಂದರಲ್ಲಿ ಪುರಸಭೆ ಸದಸ್ಯರೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ವಿವಿಧ ಅಪಘಾತಗಳಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡ ಹಿನ್ನೆಲೆ ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೆದ್ದಾರಿ ಪ್ರಾಧಿಕಾರದ ಎಇಇ ಮತ್ತು ನಿರ್ಮಾಣ ಸಂಸ್ಥೆಯ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಸುಗಮ ಮತ್ತು ಸುವ್ಯವಸ್ಥಿತ ಸರ್ವಿಸ್ ರಸ್ತೆಗಳನ್ನು ಪ್ರಯಾಣಿಕರಿಗೆ ನೀಡುವ ವರೆಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ೪೮ರ ಕಾಮಗಾರಿಯನ್ನು ಮುಂದುವರಿಸಬಾರದು ಮತ್ತು ಭೂ ವ್ಯಾಜ್ಯಗಳಿದ್ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮಂದಗತಿಯಲ್ಲಿ ಮಾಡುತ್ತಿದ್ದು, ಅದನ್ನು ತ್ವರಿತವಾಗಿ ಬಗೆಹರಿಸಿಕೊಳ್ಳುವಂತೆ ಮತ್ತು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಸಾರ್ವಜನಿಕರಿಂದ ಅಡ್ಡಿ ಇದ್ದಲ್ಲಿ ತಹಸೀಲ್ದಾರ್ ಮತ್ತು ಎಸಿ ಅವರನ್ನು ಸಂಪರ್ಕಿಸಿ ಅವರ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸವಣೂರು ವಿಭಾಗದ ಉಪವಿಭಾಗಾಧಿಕಾರಿ, ತಹಸೀಲ್ದಾರ್ ರವಿಕುಮಾರ ಕೊರವರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಸಿ ಶ್ರೀದೇವಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಸ್ಥೆ ಎಲ್.ಎನ್. ಮಾಲವಿಯಾರ ಕನ್ಸಲ್ಟನ್ಸಿ ಕಂಪನಿಯ ಅಧಿಕಾರಿಗಳು, ಗುಡ್ಡಪ್ಪ ಜಲದಿ, ಎಸ್.ಎಫ್. ಮಣಕಟ್ಟಿ, ಮಾಲತೇಶ ಸಾಲಿ ಇತರರಿದ್ದರು.ರಸ್ತೆ ನಿರ್ಮಾಣಕ್ಕೆ ಕ್ರಮ: ರಾಷ್ಟ್ರೀಯ ಹೆದ್ದಾರಿ ೪೮ರ ನಿರ್ಮಾಣ ಕಾರ‍್ಯದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಅನೇಕ ವ್ಯಾಜ್ಯಗಳು ನ್ಯಾಯಾಲಯದಲ್ಲಿವೆ. ಹೀಗಾಗಿ ರಸ್ತೆ ನಿರ್ಮಾಣದಲ್ಲಿ ವಿಳಂಬ ಆಗುತ್ತಿದೆ. ಸ್ವಾಧೀನದಲ್ಲಿರುವ ಭೂಮಿಯಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಅವಶ್ಯವಿರುವಲ್ಲಿ ಬದಲಿ ಮಾರ್ಗ ಮಾಡಲಾಗುತ್ತದೆ. ಸುರಕ್ಷಿತ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಸಿ ಶ್ರೀದೇವಿ ತಿಳಿಸಿದರು.
ಸರಣಿ ಅಪಘಾತ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಿರ್ಮಾಣ ಕಂಪನಿಯ ನಿರ್ಲಕ್ಷ್ಯದಿಂದ ಶಿಗ್ಗಾಂವಿ ಪುರಸಭೆ ಸದಸ್ಯರೊಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಎಲ್ಐಸಿ ಏಜೆಂಟರೊಬ್ಬರು ಸಾವಿಗೀಡಾಗಿದ್ದಾರೆ. ಅಲ್ಲದೆ ಅಲ್ಲದೆ ಸರಣಿ ಅಪಘಾತಕ್ಕೆ ಹಲವಾರು ಕುಟುಂಬಗಳು ಅನಾಥವಾಗಿವೆ. ಸುರಕ್ಷಿತ ರಸ್ತೆಯನ್ನು ನೀಡದಿದ್ದರೆ ಟೋಲ್‌ಗೇಟ್ ಬಳಿ ಸಾರ್ವಜನಿಕರೊಂದಿಗೆ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ತಿಳಿಸಿದರು.