ಎಚ್.ಕೆ.ಅಶ್ವತ್ಥ್ ಹಳುವಾಡಿ
ಗ್ರಾಮ ಪಂಚಾಯ್ತಿಯ ಎಲ್ಲಾ ಸಭೆಗಳ ನಡಾವಳಿಯನ್ನು ಪಂಚತಂತ್ರ ೨.೦ದಲ್ಲಿ ಅಳವಡಿಸಿದ ಜಿಲ್ಲೆಯ ಏಕೈಕ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಬೇವುಕಲ್ಲು ಗ್ರಾಮ ಪಂಚಾಯ್ತಿ ಪಾತ್ರವಾಗಿದೆ.
ಕೆಲವೊಂದು ನ್ಯೂನತೆಗಳಿದ್ದ ಪಂಚತಂತ್ರ ೧.೦ ತಂತ್ರಾಂಶವನ್ನು ಬದಲಾವಣೆ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎರಡು ವರ್ಷದ ಹಿಂದೆ ಪಂಚತಂತ್ರ ೨.೦ ಅನ್ನು ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತಂದಿತು.ಪಂಚತಂತ್ರ ಕಾರ್ಯವೈಖರಿ:
ಈ ಹಿಂದೆ ಸಭೆಯ ನಡವಳಿಗಳನ್ನು ಕೈ ಬರಹದಲ್ಲಿ ದಾಖಲಿಸಲಾಗುತ್ತಿತ್ತು. ಸಾರ್ವಜನಿಕರು ತಾವು ನೀಡಿದ ಅರ್ಜಿಗಳಿಗೆ ಸಭೆಯಲ್ಲಿ ಏನು ತೀರ್ಮಾನವಾಗಿದೆ?, ನನ್ನ ಖಾತೆಯ ಅರ್ಜಿ ಏನಾಯಿತು?, ನಾನು ಎನ್‌ಓಸಿ ನೀಡಲು ನೀಡಿದ ಅರ್ಜಿ ಕಥೆ ಏನು?, ಲೈಸೆನ್ಸ್ ಅರ್ಜಿ ಏನಾಗಿದೆ? ಎಂದು ತಿಳಿದುಕೊಳ್ಳಲು ಗ್ರಾಮ ಪಂಚಾಯ್ತಿ ಕಚೇರಿಗೆ ಬಂದು ವಿಚಾರಿಸಬೇಕಿತ್ತು. ಇಲ್ಲವೇ, ಸದಸ್ಯರಿಂದ ಮಾಹಿತಿ ಪಡೆಯಬೇಕಿತ್ತು. ಇದೆಲ್ಲಕ್ಕೂ ಅಂತ್ಯ ಹಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂತ್ರತಂತ್ರ ೨.೦ದಲ್ಲಿಯೇ ನಡಾವಳಿಯನ್ನು ದಾಖಲಿಸಲು ಮೀಟಿಂಗ್ ಮ್ಯಾನೇಜ್‌ಮೆಂಟ್ ಎಂಬ ಮ್ಯಾಡುಲ್‌ನ್ನು ತಂತ್ರಾಂಶದಲ್ಲಿ ಸೇರಿಸಿದೆ.
ಇನ್ನು ಸಭೆಯು ನಡೆಯುವ ದಿನ ಯಾವ ಯಾವ ಸದಸ್ಯರು ಹಾಜರಿದ್ದರು, ಯಾರು ಗೈರಾಗಿದ್ದರು ಎಂಬ ಮಾಹಿತಿಯು ಸಿಗಲಿದೆ. ನಿಗದಿತ ಕೋರಂ ಇಲ್ಲದೇ ಇದ್ದಲ್ಲಿ ಸಭೆಯನ್ನು ಆರಂಭ ಮಾಡಲು ಸಾಧ್ಯವಾಗುವುದಿಲ್ಲ. ಸಭೆ ಆರಂಭವಾದ ಮೇಲೆ ನಿಗದಿಪಡಿಸಿದ ಅಜೆಂಡಾಗಳಂತೆ ಚರ್ಚೆ ಆರಂಭವಾಗಬೇಕು. ಚರ್ಚೆಯ ವಿಷಯವನ್ನು ದಾಖಲಿಸುತ್ತಾ ಹೋಗಬೇಕು, ವಿಷಯಕ್ಕೆ ಸದಸ್ಯರ ಸಮ್ಮತಿ ಅಥವಾ ಅಸಮ್ಮತಿ ಪಡೆದು ಒಂದು ಅಜೆಂಡಾದಿಂದ ಮುಂದಿನ ಅಜೆಂಡಾಕ್ಕೆ ಚರ್ಚೆಗೆ ಹೋಗಬೇಕು. ಹೀಗೆ ಇಡೀ ಸಭೆಯ ಎಲ್ಲಾ ಅಜೆಂಡಾಗಳು ಮುಕ್ತಾಯವಾದ ಮೇಲೆ ಸಭೆಯಲ್ಲಿ ಹಾಜರಿರುವ ಸದಸ್ಯರ ಹೆಬ್ಬೆರಳಿನ ಗುರುತನ್ನು ಪಡೆದು ನಂತರ ಸಭೆ ಮುಕ್ತಾಯಗೊಳಿಸಬೇಕು.
ಇದರಿಂದ ಅರ್ಜಿ ನೀಡುವ ಸಾರ್ವಜನಿಕ ಗ್ರಾಮ ಪಂಚಾಯ್ತಿ ಮೆಟ್ಟಿಲನ್ನು ಏರದೆಯೇ ತನ್ನ ಅರ್ಜಿಯ ಬಗ್ಗೆ ಏನು ತೀರ್ಮಾನವಾಗಿದೆ ಎಂದು ತಿಳಿಯಬಹುದು. ಅಷ್ಟೇ ಅಲ್ಲದೇ, ಗ್ರಾಪಂ ನಿಯಮಾನುಸಾರ ನಡಾವಳಿ ದಾಖಲಿಸದಿದ್ದರೆ ವ್ಯಕ್ತಿಯು ಯಾರಿಗೆ ಮನವಿ ಸಲ್ಲಿಸಬೇಕೆಂದು ನಡಾವಳಿಯ ಕೊನೆಯಲ್ಲಿ ಮಾಹಿತಿಯು ಕೂಡ ಲಭ್ಯವಾಗುತ್ತದೆ.
-ಪ್ರತಿಭಾ, ಅಧ್ಯಕ್ಷರು, ಬೇವುಕಲ್ಲು ಗ್ರಾಮ ಪಂಚಾಯ್ತಿ