ಕೊಪ್ಪಳ:
ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಕೊಪ್ಪಳ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ಥಳೀಯರಿಗೆ ಸುಲಭವಾಗಿ ಶಿಕ್ಷಣ ಸಿಗಬೇಕಾದರೆ ವಿಶ್ವವಿದ್ಯಾಲಯಗಳು ಬೇಕು ಎಂದರು.
ವಿಶ್ವವಿದ್ಯಾಲಯಗಳು ತಂತ್ರಜ್ಞಾನ ಯುಗದಲ್ಲಿ ಸ್ಪರ್ಧೆ, ಪೈಪೋಟಿ ಜತೆಗೆ ವಿದ್ಯಾರ್ಥಿಗಳ ಬದುಕು ಅರಳಿಸುವ ಶಿಕ್ಷಣ ಕೊಡಬೇಕು ಎಂದ ಅವರು, ರಾಜಕೀಯ ಇರುವುದು ಸೇವೆಗಾಗಿ. ಆದರೆ, ಇಂದು ಅದು ಹಿಂದೆ ಸರಿದು ಅಧಿಕಾರ ಮುಂದೆ ಬಂದಿದೆ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಆಗಬಾರದು. ಒಂದು ದೇಶದ ಅಭಿವೃದ್ಧಿ ಅಲ್ಲಿಯ ಶಿಕ್ಷಣದ ಮೇಲೆ ನಿಂತಿರುತ್ತದೆ ಎಂದು ಹೇಳಿದರು.ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಹೊಸ ವಿವಿ ನಡೆಸಿಕೊಂಡು ಹೋಗುವುದು ಸಾಮಾನ್ಯ ಕೆಲಸವಲ್ಲ. ಕಳೆದ 2 ವರ್ಷಗಳಿಂದ ಪ್ರೊ. ಬಿ.ಕೆ. ರವಿ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಅವರ ಕಾಳಜಿ ತೋರಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ, ವಿವಿ ಆರಂಭವಾದ ನಂತರ ಹೆಣ್ಣು ಮಕ್ಕಳ ಕಲಿಕೆ ಹೆಚ್ಚಾಗಿದೆ. ಶಿಕ್ಷಣ ಬಲಪಡಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಓದುವ ವಿಷಯದಲ್ಲಿ ಆಳವಾದ ಜ್ಞಾನ ಇದ್ದರೆ ನೇಮಕಾತಿ ಆದೇಶ ಪತ್ರ ನಿಮ್ಮ ಮನೆಬಾಗಿಲಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ವೇಳೆ ಪದ್ಮಶ್ರೀ ಪುರಸ್ಕೃತ ಭೀಮವ್ವ ಶಿಳ್ಳೆಕ್ಯಾತರ ಅವರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಕಲ್ಯಾಣ ವಾಣಿ ಪತ್ರಿಕೆಯ ವಿಶೇಷ ಸಂಚಿಕೆ ಹಾಗೂ ಕೆಯುಕೆ ನ್ಯೂಸ್ ಲೋಗೊ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.