ಹೊಸ ವರ್ಷಾಚರಣೆ ರಾತ್ರಿ 12.30ರೊಳಗೆ ಪೂರ್ಣಗೊಳಿಸಿ: ಮಂಗಳೂರು ಪೊಲೀಸರ ಸೂಚನೆ

KannadaprabhaNewsNetwork |  
Published : Dec 19, 2025, 03:00 AM IST
ಸುಧೀರ್‌ ಕುಮಾರ್‌ ರೆಡ್ಡಿ  | Kannada Prabha

ಸಾರಾಂಶ

ಹೊಸ ವರ್ಷಾಚರಣೆ ಆಯೋಜನೆ ಮಾಡುವವರು ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್‌ ಕಮಿಷನರಟ್‌ ವ್ಯಾಪ್ತಿಯ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿಯಿಂದ ಪೂರ್ವ ಅನುಮತಿ ಪಡೆಯಬೇಕು ಎಂದು ಕಮಿಷನರ್ ತಿಳಿಸಿದ್ದಾರೆ.

ಮಂಗಳೂರು: ಹೊಸ ವರ್ಷಾಚರಣೆ ಆಯೋಜನೆ ಮಾಡುವ ಹೊಟೇಲ್‌ಗಳು, ರೆಸ್ಟೋರೆಂಟ್‌ ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಮತ್ತು ಇತರೆ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಲು ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್‌ ಕಮಿಷನರಟ್‌ ವ್ಯಾಪ್ತಿಯ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿಯಿಂದ ಪೂರ್ವ ಅನುಮತಿ ಪಡೆಯಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಅನುಮತಿಗಾಗಿ ಅರ್ಜಿಗಳನ್ನು ಡಿ.23ರ ಸಂಜೆ 5 ಗಂಟೆಯೊಳಗೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಪೂರ್ವ ಅನುಮತಿ ಇಲ್ಲದ ಹೊಸ ವರ್ಷದ ಆಚರಣೆಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸ ವರ್ಷ ಕಾರ್ಯಕ್ರಮ ರಾತ್ರಿ 12.30ರ ಒಳಗಾಗಿ ಪೂರ್ಣಗೊಳ್ಳಬೇಕು. ಧ್ವನಿ ಮುದ್ರಣ ವ್ಯವಸ್ಥೆಗಳು, ಲೌಡ್‌ ಸ್ಪೀಕರ್‌ ಬಳಸಲು ಸಂಬಂಧಪಟ್ಟ ಪ್ರಾ​ಧಿಕಾರದಿಂದ ಪೂರ್ವ ಅನುಮತಿ ಪಡೆಯಬೇಕು. ಧ್ವನಿಯ ಮಟ್ಟ ಶಬ್ದಮಾಲಿನ್ಯ ನಿಯಮಗಳು 2000 ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಬೇಕು. ಡಿಜೆ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿ​ಸಲಾಗಿದೆ. ಹೊಸ ವರ್ಷಾಚರಣೆ ಕಾರ್ಯಕ್ರಮಗಳಲ್ಲಿ ಯಾವುದೇ ಕಾರಣಕ್ಕೂ ನಿಷೇದಿ​ತ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಸೇವನೆಯನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇ​ಧಿಸಲಾಗಿದೆ. ಹೊಸ ವರ್ಷಾಚರಣೆ ನೆಪದಲ್ಲಿ ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನಗಳು, ಜೂಜು ಹಾಗೂ ಇತರ ಅನೈತಿಕ ಚಟುವಟಿಕೆಗಳನ್ನು ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇ​ಧಿಸಲಾಗಿದೆ. ಮದ್ಯ ಮಾರಾಟ ಮತ್ತು ವಿತರಣೆಗೆ ಸ್ಥಳೀಯ ಅಬಕಾರಿ ಇಲಾಖೆಯಿಂದ ಲಿಖಿತ ಅನುಮತಿ ಕಡ್ಡಾಯವಾಗಿ ಪಡದುಕೊಂಡಿರಬೇಕು. ಆಯೋಜಕರು ಸಂಬಂ​ಧಿತ ಇಲಾಖೆಗಳಿಂದ ಪಡೆದ ಲೈಸನ್ಸ್‌ ಮತ್ತು ಅನುಮತಿ ಪ್ರಕಾರ ನಿರ್ಧರಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣಗಳು, ಉದ್ಯಾನಗಳು, ಕ್ರೀಡಾಂಗಣಗಳು, ರೈಲ್ವೆ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇ​ಧಿಸಲಾಗಿದೆ. ವಿದ್ಯಾರ್ಥಿಗಳು ಅಥವಾ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ಕಿಡಿಗೇಡಿತನವನ್ನು ಪ್ರದರ್ಶನ ಮಾಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಆಯೋಜಕರು ಪ್ರತ್ಯೇಕವಾಗಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು.ಸಂಭ್ರಮಾಚರಣೆಯ ಹೆಸರಿನಲ್ಲಿ ಮಹಿಳೆಯರನ್ನು ಚುಡಾಯಿಸುವ, ಕಿರುಕುಳ ನೀಡುವ, ಹಿಂಸಾಚಾರ ಅಥವಾ ಅಶ್ಲೀಲ ಚಟುವಿಕೆಗಳನ್ನು ತಡೆಹಿಡಿಯಲು ವಿಶೇಷ ಕಾರ್ಯಪಡೆಗಳನ್ನು ನಿಯೋಜಿಸಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನೊಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಪಡೆಯು ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ದ ಡ್ರಂಕ್‌ ಆ್ಯಂಡ್‌ ಡ್ರೈವ್‌ ರೀತಿಯ ಕಾನೂನು ಕ್ರಮ ಕೈಗೊಂಡು ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು.ಸ್ಟಂಟ್‌ ಚಟುವಟಿಕೆಗಳು, ವ್ಹೀಲಿಂಗ್‌, ಡ್ರಾಗ್‌ ರೇಸಿಂಗ್‌, ವೇಗದ ಚಾಲನೆಯನ್ನು ಕಡ್ಡಾಯವಾಗಿ ನಿಷೇಧಿ​ಸಲಾಗಿದೆ. ಈ ಘಟನೆಗಳನ್ನು ತಡೆಯಲು ವಿಶೇಷ ತಂಡಗಳನ್ನು ನಿಯೋಜಿಸಲಾಗುತ್ತದೆ. ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಮುದ್ರ ಬದಿಗಳಲ್ಲಿ ಮದ್ಯ ಸೇವಿಸುವುದು, ಅಶ್ಲೀಲ ವರ್ತನೆಗಳು, ಇತರ ಅಶ್ಲೀಲ ಪ್ರದರ್ಶನಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು