ಉಡುಪಿ: ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಜೊತೆ ಸೇರಿಕೊಂಡು ನಡೆಸುತ್ತಿರುವ ವೋಟ್ ಚೋರಿಯ ಬಗ್ಗೆ ಜನಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಡಿ. 20 ರಂದು ಬೆಳಿಗ್ಗೆ 9.30ಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಮಣಿಪಾಲದ ಸಿಂಡಿಕೇಟ್ ವೃತ್ತದವರೆಗೆ ಮಾನವ ಸರಪಣಿ ನಡೆಸಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ತಿಳಿಸಿದ್ದಾರೆ.ಅವರು ಗುರುವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ವೋಟ್ ಚೋರಿಯ ವಿರುದ್ಧ ನಡೆದ ಬೃಹತ್ ಸಹಿ ಸಂಗ್ರಹ ಅಭಿಯಾನದ ಸಮಾರೋಪ ಅಂಗವಾಗಿ ನಡೆಯುವ ಈ ಮಾನವ ಸರಪಣಿ ಕಾರ್ಯಕ್ರಮದಲ್ಲಿ 4 ಕಿ ಮಿ ಉದ್ದದ ಸಹಿ ಸಂಗ್ರಹದ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.ಉಡುಪಿಯಿಂದ ಮಣಿಪಾಲದವರೆಗೆ 4 ಕಿ ಮಿ ಉದ್ದದ ಈ ಮಾನವ ಸರಪಣಿಯಲ್ಲಿ ಜಿಲ್ಲೆಯಾದ್ಯಂತದಿಂದ 3 ರಿಂದ 4 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ವಿ.ಪ.ಸದಸ್ಯ ಐವನ್ ಡಿಸೋಜ ಮುಂತಾದವರು ಭಾಗವಹಿಸಲಿದ್ದಾರೆ.
ಉಡುಪಿಯಲ್ಲಿ ಓಟ್‌ಚೋರಿ: ಕಳೆದ 10 ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಿದ್ದಾರೆ. ಸಮರ್ಥ ಅಭ್ಯರ್ಥಿಗಳು, ಕಾಂಗ್ರೆಸ್ ಪರ ಸಾಕಷ್ಟು ಮತದಾರರು ಇದ್ದರೂ ಕಾಂಗ್ರೆಸ್ ಗೆ ಸೋಲಾಗಿದೆ ಎಂದರೆ ಉಡುಪಿ ಜಿಲ್ಲೆಯಲ್ಲಿಯೂ ವೋಟ್ ಚೋರಿಯಾಗಿದೆ ಎನ್ನುವ ಸಂಶಯವಿದೆ ಎಂದು ಅಶೋಕ್ ಕೊಡವೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ, ಪಕ್ಷದ ನಾಯಕರಾದ ಪ್ರಶಾಂತ್ ಜತ್ತನ್ನ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ರಾಜು ಖಾರ್ವಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಭಾಸ್ಕರ ರಾವ್ ಕಿದಿಯೂರು ಮುಂತಾದವರಿದ್ದರು.ಕೋರ್ಟಿಂದ ಬಿಜೆಪಿಗೆ ಕಪಾಳಮೋಕ್ಷಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಎಫ್‌ಐಆರ್ ಇಲ್ಲದೆ ಕಾಂಗ್ರೆಸ್ ನಾಯಕರ ಮೇಲೆ ಪ್ರಕರಣ ದಾಖಲಿಸಿತ್ತು. ಈಗ ಕಾಂಗ್ರೆಸ್ ಪರವಾಗಿ ತೀರ್ಪು ನೀಡಿ ನ್ಯಾಯಾಲಯ ಬಿಜೆಪಿಗೆ ಕಪಾಳ ಮೋಕ್ಷ ಮಾಡಿದೆ ಎಂದು ವಿನಯಕುಮಾರ್ ಸೊರಕೆ ಹೇಳಿದರು.
ಬಿಜೆಪಿ ಸರ್ಕಾರ ಚುನಾವಣಾ ಆಯೋಗ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಡಿದೆ. ಮಹಾತ್ಮಾಗಾಂಧಿ ನರೇಗಾ ಯೋಜನೆಯ ಹೆಸರು ಬದಲಿಸಿ ಮಹಾತ್ಮಾಗಾಂಧಿಜಿ ಅವರಿಗೆ ಅವಮಾನ ಮಾಡಿದೆ. ರಾಜ್ಯಕ್ಕೆ ಬರಬೇಕಾಗಿದ್ದ ಜಿಎಸ್‌ಟಿ ಪಾಲು, ಪ್ರಕೃತಿ ವಿಕೋಪ ಪರಿಹಾರಗಳನ್ನೂ ನೀಡುತ್ತಿಲ್ಲ. ಬಿಜೆಪಿ ಭಸ್ಮಾಸುರನಂತೆ, ತನ್ನ ತಲೆ ಮೇಲೆ ತನ್ನ ಕೈಯನ್ನಿಟ್ಟುಕೊಂಡು ವಶವಾಗಲಿದೆ ಎಂದು ಸೊರಕೆ ಹೇಳಿದರು.