ದಿಶಾ ಸಭೆಯಲ್ಲಿ ಡಿಡಿಪಿಐ ವಿರುದ್ಧ ಸಂಸದ ಕಾರಜೋಳ ತೀವ್ರ ಅಸಮಧಾನ । ಶಾಲಾ ಕಟ್ಟಡಗಳ ಅಭಿವೃದ್ಧಿ ಹಿನ್ನಡೆಗೆ ಕೆಂಡಾಮಂಡಲ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಾಲಾ ಕೊಠಡಿಗಳ ದುರಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಅಭಿವೃದ್ಧಿ ಪಾಠ ಮಾಡಿದರು. ವೈಫಲ್ಯಕ್ಕೆ ನೀವೇ ಕಾರಣವೆಂದು ನೇರ ಆಪಾದಿಸಿದರು. ಕೊಠಡಿಗಳ ದುರಸ್ತಿ ಕಾರ್ಯವನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ಗೋವಿಂದ ಕಾರಜೋಳ, ಜಿಲ್ಲೆಯ ವಿವಿಧೆಡೆ ಬಹುತೇಕ ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿರುವುದನ್ನು ಗಮನಿಸಿದ್ದೇನೆ. ಸರ್ಕಾರಿ ಶಾಲೆಗಳಿಗೆ ಕಡು ಬಡುವರ ಮಕ್ಕಳು ಬರುತ್ತಾರೆ. ಶಾಲಾ ಕೊಠಡಿಗಳ ದುರಸ್ತಿಗಾಗಿ ಕೆಎಂಇಆರ್‌ಸಿ, ಡಿಎಂಎಫ್ ಅನುದಾನ ಸೇರಿದಂತೆ ಜಿಲ್ಲೆಗೆ 3,700 ಕೋಟಿ ಅನುದಾನ ದೊರೆತಿದೆ. ಆದಾಗ್ಯೂ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ. ನಿಮ್ಮ ವೈಫಲ್ಯವೇ ಕಾರಣ ಎಂದರು.
ಈ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ತ್ವರಿತವಾಗಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಒಟ್ಟು 609 ಸರ್ಕಾರಿ ಪ್ರಾಥಮಿಕ ಶಾಲೆಗಳು ಇದ್ದು, ಈ ಪೈಕಿ ಆರ್‌ಸಿಸಿ ಮೇಲ್ಛಾವಣಿ, ಶೀಟ್ ಹಾಗೂ ಹೆಂಚಿನ ಮೇಲ್ಛಾವಣಿ ಹೊಂದಿರುವ ಶಾಲೆಗಳು ಎಷ್ಟು ಎಂಬುದರ ಬಗ್ಗೆ ತಾಲೂಕುವಾರು ವಿವರ ನೀಡಬೇಕು. ಶಾಲೆಗಳ ದುರಸ್ತಿಗಾಗಿ ಒದಗಿಸಲಾಗಿರುವ ಅನುದಾನದ ಖರ್ಚು ವೆಚ್ಚದ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ವಹಿಸಬೇಕು ಸೂಚಿಸಿದರು.
ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕೋಲ್ಡ್ ಸ್ಟೋರೇಜ್ ತೀರಾ ಅವಶ್ಯಕವಾಗಿದ್ದು, ಕೋಲ್ಡ್ ಸ್ಟೋರೇಜ್‍ಗೆ 10 ಲಕ್ಷ ರು.ಅನುದಾನವನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ಕಾರಣಕ್ಕೂ ಕಾಟಾಚಾರದ ಕೆಲಸ ಆಗಬಾರದು ಎಂದು ಸಂಸದ ಗೋವಿಂದ ಕಾರಜೋಳ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್‍ಗೆ ಸೂಚಿಸಿದರು.
ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಚಿತ್ರದುರ್ಗದಲ್ಲಿ ವಾರದಲ್ಲಿ ಎರಡು ದಿನ ಅಂದರೆ ಗುರುವಾರ ಮತ್ತು ಶುಕ್ರವಾರ ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ಆದೇಶ ಪತ್ರ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.