ಕಾಲಮಿತಿಯೊಳಗೆ ಎಸ್‌ಐಆರ್ ಪೂರ್ಣಗೊಳಿಸಿ

KannadaprabhaNewsNetwork |  
Published : Jul 05, 2026, 02:15 AM IST
4ಕೆಪಿಎಲ್8:ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಜರುಗಿದ  ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಮಾತನಾಡಿದರು.   | Kannada Prabha

ಸಾರಾಂಶ

ನಿಗದಿತ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಬೇಕು.ಕನಿಷ್ಠ 4 ದಿನಕ್ಕೊಮ್ಮೆ ಬಿಎಲ್‌ಒ ಗಳು ಅವರ ಸೂಪರ್‌ವೈಸರ್‌ಗಳ ಜತೆ ಜೂಮ್ ಮೀಟಿಂಗ್ ಮೂಲಕ ಪ್ರಗತಿ ವರದಿ, ಮನೆ ಭೇಟಿ ಸಂದರ್ಭ ಎದುರಿಸುತ್ತಿರುವ ಸಮಸ್ಯೆ ತಿಳಿಸಬಹುದು

ಕೊಪ್ಪಳ: ಭಾರತ ಚುನಾವಣಾ ಆಯೋಗದ ವೇಳಾ ಪಟ್ಟಿಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ವಸತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಬಿಎಲ್‌ಒ ಕಡ್ಡಾಯ ಮನೆಮನೆಗೆ ಭೇಟಿ ನೀಡಿ ನಿಯಮಾನುಸಾರ ಗಣತಿ ನಮೂನೆ ಭರ್ತಿ ಮಾಡಲು ಮತದಾರರಿಗೆ ಸಹಾಯ ಮಾಡಬೇಕು. ನಿಗದಿತ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಬೇಕು.ಕನಿಷ್ಠ 4 ದಿನಕ್ಕೊಮ್ಮೆ ಬಿಎಲ್‌ಒ ಗಳು ಅವರ ಸೂಪರ್‌ವೈಸರ್‌ಗಳ ಜತೆ ಜೂಮ್ ಮೀಟಿಂಗ್ ಮೂಲಕ ಪ್ರಗತಿ ವರದಿ, ಮನೆ ಭೇಟಿ ಸಂದರ್ಭ ಎದುರಿಸುತ್ತಿರುವ ಸಮಸ್ಯೆ ತಿಳಿಸಬಹುದು. ಈ ಮೂಲಕ ಬಿಎಲ್‌ಒಗಳ ದೂರು, ಸಮಸ್ಯೆ ಪರಿಹರಿಸಲು ಅನುಕೂಲವಾಗುತ್ತದೆ. ಹಾಗೆಯೇ ಹಂತ ಹಂತವಾಗಿ ಪರಿಷ್ಕರಣೆ ಕಾರ್ಯದ ನಿಯೋಜಿತ ಅಧಿಕಾರಿಗಳು ಆನ್‌ಲೈನ್ ಮೀಟಿಂಗ್ ಮೂಲಕ ಪ್ರಗತಿ ವರದಿ ಪರಿಶೀಲಿಸಬೇಕು. ಜಿಲ್ಲೆಯಿಂದ ವಲಸೆ ಹೋದ, ಮರಣ ಹೊಂದಿದ, ಎರಡು ಕಡೆ ಮತದಾರರ ಪಟ್ಟಿಯಲ್ಲಿರುವ ಹೆಸರು ಪತ್ತೆ ಮಾಡಿ ಸರಿಪಡಿಸಬೇಕು ಎಂದು ತಿಳಿಸಿದರು.

2025ರ ಜ. 6ರ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 11,85,489 ಮತದಾರರಿದ್ದು, 2026ರ ಜೂ.16ರಂತೆ ಮತದಾರರ ಸಂಖ್ಯೆ 11,90,214 ರಷ್ಟಿದೆ. ಜಿಲ್ಲೆಯಲ್ಲಿ ಭಾರತ ಚುನಾವಣಾ ಆಯೋಗದ ವೇಳಾ ಪಟ್ಟಿಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯ ಪ್ರಗತಿಯಲ್ಲಿದೆ.ಇದಕ್ಕಾಗಿ ಜಿಲ್ಲಾಮಟ್ಟದ 5 ಅಧಿಕಾರಿ ಇಆರ್‌ಒ ಗಳಾಗಿ, ತಾಲೂಕು ಮಟ್ಟದ 7 ಅಧಿಕಾರಿಗಳನ್ನು ಎಇಆರ್‌ಒ ಗಳಾಗಿ ನೇಮಕ ಮಾಡಲಾಗಿದೆ. ಒಟ್ಟು 1315 ಬಿಎಲ್‌ಒ ಗಳನ್ನು ಹಾಗೂ 155 ಬಿಎಲ್‌ಒ ಸೂಪರ್‌ವೈರ‍್ಸಗಳನ್ನು, 117 ನೋಡಲ್ ಅಧಿಕಾರಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಜು.4ರ ಬೆಳಗ್ಗೆ 10 ಗಂಟೆಗೆ ಒಟ್ಟು 9,23,948 ಗಣತಿ ನಮೂನೆ ವಿತರಿಸಲಾಗಿದೆ. ಈ ಮೂಲಕ ಶೇ.77.63 ರಷ್ಟು ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಮಹಮ್ಮದ್ ಜೀಲಾನಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಪಂ ಯೋಜನಾ ನಿರ್ದೇಶಕ ಶ್ಯಾಮ್‌ಸುಂದರ್ ಕಾಂಬ್ಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತಾಪಂ ಸಿದ್ಧ
ಸಾಲಗಾರರ ಕಿರುಕುಳಕ್ಕೆ ಮೂವರು ಬಲಿ