ನವೆಂಬರದೊಳಗೆ ಜಲಧಾರೆ ಯೋಜನೆ ಪೂರ್ಣಗೊಳಿಸಿ

KannadaprabhaNewsNetwork |  
Published : May 19, 2026, 04:00 AM IST
18ಬಿಎಸ್ವಿ01- ಬಸವನಬಾಗೇವಾಡಿ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮುನ್ನಚ್ಚರಿಕೆ ಕ್ರಮದ ಕುರಿತು ಸಭೆ ಜರುಗಿತು. | Kannada Prabha

ಸಾರಾಂಶ

ಜಲಧಾರೆ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಗುತ್ತಿಗೆದಾರರು ಬರುವ ನವೆಂಬರದೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ ಆಯಾ ಪ್ರದೇಶದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಸಚಿವ ಶಿವಾನಂದ ಪಾಟೀಲ ಖಡಕ್‌ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜಲಧಾರೆ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಗುತ್ತಿಗೆದಾರರು ಬರುವ ನವೆಂಬರದೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ ಆಯಾ ಪ್ರದೇಶದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಸಚಿವ ಶಿವಾನಂದ ಪಾಟೀಲ ಖಡಕ್‌ ಸೂಚನೆ ನೀಡಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಧಾರೆ ಯೋಜನೆಯಡಿ ವಿಜಯಪುರ, ಬಸವನಬಾಗೇವಾಡಿ, ಇಂಡಿ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಿಗೆ, ಇಂಡಿ ಪಟ್ಟಣ ಹಾಗೂ 4 ಸ್ಥಳೀಯ ಸಂಸ್ಥೆಗಳಾದ ಚಡಚಣ, ಮನಗೂಳಿ, ನಿಡಗುಂದಿ, ಕೊಲ್ಹಾರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ 2022ರ ಸೆಪ್ಟಂಬರ್ 9 ರಲ್ಲಿ ಆರಂಭವಾಗಿ 2025ರ ಮಾರ್ಚ್‌ 29ಕ್ಕೆ ಕಾಮಗಾರಿ ಅವಧಿ ಮುಕ್ತಾಯವಾದರೂ ಇದುವರೆಗೆ ಈ ಯೋಜನೆಯಡಿ ಸಂಬಂಧಿಸಿದ ಗುತ್ತಿಗೆದಾರರು ಕುಡಿಯುವ ನೀರು ಸರಬರಾಜು ಮಾಡಿಲ್ಲ. ಈ ಯೋಜನೆಯಡಿ ಗುತ್ತಿಗೆದಾರರು ಇದುವರೆಗೂ ಜಿಎಸ್‌ಟಿ ಸೇರಿದಂತೆ ₹1,300 ಕೋಟಿ ಅನುದಾನ ಬಳಕೆ ಮಾಡಿಕೊಂಡಿದ್ದಾರೆ ಎಂದು ಅಸಮಧಾನ ಹೊರಹಾಕಿದರು.ಈ ಯೋಜನೆಯಡಿ ಕಾಮಗಾರಿ ಮಾಡುತ್ತಿರುವ ಶ್ರೀನಿವಾಸ ಕನಸ್ಟ್ರಕ್ಷನ್ಸ್ ಇಂಡಿಯಾ ಪ್ರೈ.ಲಿ ಇದುವರೆಗೂ ಶೇ.81 ರಷ್ಟು ಕಾಮಗಾರಿ ಪೂರ್ಣಗೊಳಿಸಿದೆಂಬ ಮಾಹಿತಿ ನೀಡಿದೆ. ಅಧಿಕಾರಿಗಳು ಈ ಯೋಜನೆಯ ಕುರಿತು ಸರಿಯಾಗಿ ನೋಡದೇ ಇರುವುದರಿಂದಾಗಿ ಕಾಮಗಾರಿ ಕುಂಠಿತವಾಗಿ ಸಾಗಿದೆ. ಅಲ್ಲದೇ ₹1 ಸಾವಿರ ಕೋಟಿಕ್ಕಿಂತಲೂ ಹೆಚ್ಚು ಅನುದಾನ ತೆಗೆದುಕೊಂಡಿದ್ದಾರೆ. ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಏಕೆ ಇಡಬಾರದು?. ಸಭೆಯಲ್ಲಿ ಹಾಜರಿದ್ದ ಗುತ್ತಿಗೆದಾರ ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ ಮಲ್ಲಿಕಾರ್ಜನ ಅವರನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡು ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಅವರಿಗೆ ಈ ಯೋಜನೆಯ ಕುರಿತು ಸಭೆ ನಡೆಸಿ ಕಾಮಗಾರಿ ತೀವ್ರಗತಿಯಲ್ಲಿ ಪೂರ್ಣಗೊಳ್ಳುವಂತೆ ಸೂಚಿಸಿದರು.

ಅರಣ್ಯ ಇಲಾಖೆಯ ಪ್ರದೇಶದಲ್ಲಿ ಇಲಾಖೆಯ ಅನುಮತಿಯಿಂದಾಗಿ ಕಾಮಗಾರಿ ಕೈಗೊಳ್ಳಲು ತಡವಾಗಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ಸಂಪರ್ಕ ಸಮಸ್ಯೆಯಿಂದಾಗಿ ಕಾಮಗಾರಿ ವಿಳಂಬವಾಗಿದೆಂದು ಸಭೆಗೆ ಮಲ್ಲಿಕಾರ್ಜುನ ಸಭೆಗೆ ತಿಳಿಸಿದಾಗ ಸಚಿವರು ಕಳೆದ ಕೆಡಿಪಿ ಸಭೆಯಲ್ಲಿಯೇ ಈ ಯೋಜನೆಯ ಕುರಿತು ಚರ್ಚಿಸಿ ಮಾರ್ಚ್‌ದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರೂ ಕಾಮಗಾರಿ ವಿಳಂಬ ಮಾಡುವ ಜೊತೆಗೆ ₹1 ಸಾವಿರ ಕೋಟಿ ಅನುದಾನ ಡ್ರಾ ಮಾಡಿಕೊಂಡಿರಿ. ಇದುವರೆಗೂ ಯಾವುದಕ್ಕೆ ಏಷ್ಟು ಖರ್ಚು ಮಾಡಿದ್ದೀರಿ ಎಂಬುವುದನ್ನು ತಿಳಿಸಬೇಕು. ಈಗಾಗಲೇ ಕಾಮಗಾರಿ ಮುಕ್ತಾಯಗೊಳಿಸಲು ಅವಧಿ ವಿಸ್ತರಣೆ ಮಾಡಿಕೊಂಡಿದ್ದೀರಿ. ಬರುವ ನವೆಂಬರದೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ ಈ 3 ತಾಲೂಕಿಗಳಿಗೆ ಜಲಧಾರೆ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ತಾಕಿತು ಮಾಡಿದರು.ಸಭೆಯಲ್ಲಿ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಕೇಳಿದಾಗ ಬಹುತೇಕ ಪಿಡಿಒಗಳು ನೀರಿನ ಸಮಸ್ಯೆ ಇಲ್ಲ. ಕೆಲವರು ಪ್ರತಿದಿನ ನೀರು ಬಿಡುವುದಾಗಿ ಹೇಳಿದರೆ, ಕೆಲವರು ಎರಡ್ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದಾಗಿ ತಿಳಿಸಿದರು.ಸಚಿವರು ಉಕ್ಕಲಿದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅಲ್ಲಿನ ಪಿಡಿಒ ಸಮಸ್ಯೆ ಇಲ್ಲವೆಂದು ಹೇಳುತ್ತಿದ್ದಾರೆ. ಅವರು ಸರಿಯಾಗಿ ಗಮನಿಸಿಲ್ಲವೆಂದ ಅವರು ಈ ಗ್ರಾಮಕ್ಕೆ ಎರಡು ಕಡೆಗಳಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿ.ಬಿ.ಗೊಂಗಡಿ ಅವರಿಗೆ ಎರಡು ಕಡೆಗಳಿಂದಲೂ ಈ ಗ್ರಾಮಕ್ಕೆ ನೀರು ಸರಬರಾಜು ಆಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.ಮಸಬಿನಾಳ ಗ್ರಾಮದಲ್ಲಿರುವ ಬಾವಿ ಸ್ವಚ್ಛಗೊಳಿಸಿ ಜನರಿಗೆ ಸಮರ್ಪಕವಾಗಿ ನೀರು ಪೂರೈಸಬೇಕೆಂದು ಸಂಬಂಧಿಸಿದ ಪಿಡಿಒಗೆ ನಿರ್ದೇಶನ ನೀಡಿದರು.ನಿನ್ನೆ ಡೋಣೂರ ಗ್ರಾಮದ ಜಾತ್ರೆಗೆ ಹೋದ ಸಂದರ್ಭದಲ್ಲಿ ಅಲ್ಲಿನ ಪಿಡಿಒ ಗ್ರಾಮದ ಚರಂಡಿ ಸ್ವಚ್ಛಗೊಳಿಸದೇ ಇರುವುದು. ಡಿಡಿಟಿ ಪೌಡರ್ ಸಿಂಪರಣೆ ಮಾಡದೇ ಇರುವುದು ಕಂಡುಬಂದಿತ್ತು. ಗ್ರಾಮದಲ್ಲಿ ಜಾತ್ರೆ ಇದ್ದ ಹಿನ್ನೆಲೆಯಲ್ಲಿ ಹಲವಾರು ಶ್ರೀಗಳು, ಸಾವಿರಾರು ಜನರು ಆಗಮಿಸಿದ್ದರು. ಜನರ ಆರೋಗ್ಯ ದೃಷ್ಟಿಯಿಂದ ಅಧಿಕಾರಿಗಳು ಇಂತಹ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳದೇ ಇರುವುದು ಸರಿಯಲ್ಲ. ಸಂಬಂಧಿಸಿದ ಪಿಡಿಒಯವರನ್ನು ತರಾಟೆಗೆ ತೆಗೆದುಕೊಂಡರು. ಮಲಘಾಣ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿಯೇ ಮಹಿಳೆಯರು ಬಹಿರ್ದೆಸೆಗೆ ಕುಳಿತುಕೊಳ್ಳುತ್ತಾರೆ. ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದರೂ ಈ ಗ್ರಾಮದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಂಬಂದಿಸಿದ ಪಿಡಿಒ ಅವರು ಗ್ರಾಮಸ್ಥರಿಗೆ ಇದರ ಬಗ್ಗೆ ಮಾಹಿತಿ ನೀಡಿ ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳುವಂತೆ ಹೇಳಬೇಕು. ಈ ಪಂಚಾಯತಿ ಪಿಡಿಒ ಮೇಲೆ ಯಾಕೆ ಕೊಲ್ಹಾರ ತಾಪಂ ಇಒ ಪ್ರಕರಣ ದಾಖಲು ಮಾಡಬಾರದು ಎಂದು ಪ್ರಶ್ನಿಸಿದರು.ಮನಗೂಳಿ ಪಟ್ಟಣದ ಯಾವ ರಸ್ತೆಗೆ ಹೋದರೂ ಪ್ಲಾಟ್ ಹಾಕಿರುವುದು ಕಂಡುಬರುತ್ತಿದೆ. ಅಲ್ಲಿನ ಮುಖ್ಯಾಧಿಕಾರಿಗಳು ಸುಮ್ಮನೆ ಕುಳಿತುಕೊಂಡಿದ್ದಾರೆ. ಇದರ ಬಗ್ಗೆ ಕೇಳಿದಾಗ ಮನಗೂಳಿ ಪಪಂ ಮುಖ್ಯಾಧಿಕಾರಿ ನಿಖಿಲ್ ಪಾಟೀಲರು ಒಂದು ಲೇಔಟ್ ಮಾತ್ರವಿದೆ ಎಂದಾಗ ನೀನು ಸರಿಯಾಗಿ ನೋಡಿಲ್ಲ. ಏನು ಕತ್ತೆ ಕಾಯುತ್ತಿದ್ಯಾ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಸಭೆಯಲ್ಲಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ಅವರಿಗೆ ಮನಗೂಳಿ ಪಟ್ಟಣದಲ್ಲಿರುವ ಲೇಔಟ್‌ಗಳಲ್ಲಿ ಅಧಿಕೃತ, ಅನಧಿಕೃತ ಕುರಿತು ಪರಿಶೀಲಿಸಿ ಮಾಹಿತಿ ನೀಡುವಂತೆ ತಿಳಿಸಿದರು.ಮುತ್ತಗಿ ಪಂಚಾಯತಿ ವ್ಯಾಪ್ತಿಯ ಟಕ್ಕಳಕಿ ಪಾಲಿಟೆಕ್ನಿಕ್ ಹಾಗೂ ಐಟಿಐ ಕಾಲೇಜಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಮುತ್ತಗಿ ಗ್ರಾಪಂ ಪಿಡಿಒಗೆ ಸೂಚಿಸಿದರು. ಬಸವನಬಾಗೇವಾಡಿ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆ ಕುರಿತು ಸಚಿವರು ಮಾಹಿತಿ ಕೇಳಿದಾಗ ಬಸವನಬಾಗೇವಾಡಿಯಲ್ಲಿ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ ಸಭೆಗೆ ಮಾಹಿತಿ ನೀಡಿದರು. ಅಖಂಡ ತಾಲೂಕಿನಲ್ಲಿ ಆಯಾ ತಹಸೀಲ್ದಾರ್‌ರು ಟಾಸ್ಕ್‌ಪೋರ್ಸ್‌ ಸಭೆ ನಡೆಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ, ಸಿಇಒ ರಿಷಿ ಆನಂದ, ಕಂದಾಯ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಸವನಬಾಗೇವಾಡಿ ತಹಸೀಲ್ದಾರ್‌ ಯಮನಪ್ಪ ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ್‌ ಸಂತೋಷ ಮ್ಯಾಗೇರಿ, ಬಸವನಬಾಗೇವಾಡಿ, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ, ಕೊಲ್ಹಾರ ತಾಪಂ ಇಒ ಸುನೀಲ ಮದ್ದಿನ, ಮನಗೂಳಿ ಪಪಂ ಅಧ್ಯಕ್ಷರು, ನಿಡಗುಂದಿ ಪಪಂ ಅಧ್ಯಕ್ಷರು ಸೇರಿದಂತೆ ಜಿಲ್ಲಾಮಟ್ಟದ, ತಾಲೂಕಾಮಟ್ಟದ ಅಧಿಕಾರಿಗಳು, ಅಖಂಡ ತಾಲೂಕಿನ ಪಿಡಿಒಗಳು ಇದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯಾಗದೇ ಕೇವಲ ಕುಡಿಯುವ ನೀರು ಸಮಸ್ಯೆ ಕುರಿತು ಮಾತ್ರ ಚರ್ಚೆಯಾಯಿತು. ಫೋನ್ ಹೊರಗಡೆ ಇಟ್ಟು ಬಾ ಎಂದ ಸಚಿವ ಶಿವಾನಂದ!

ಸಭೆ ಆರಂಭಕ್ಕೂ ಮುನ್ನ ಸಭೆಯಲ್ಲಿ ಅಧಿಕಾರಿಗಳ ಪೋನ್ ರಿಂಗ್ ಆಗುವುದನ್ನು ಗಮನಿಸಿದ ಸಚಿವ ಶಿವಾನಂದ ಪಾಟೀಲ ಎ ಫೋನ್ ಹೊರಗಡೆ ಇಟ್ಟು ಬಾ, ಫೋನ್ ಬಂದ್ರೆ ಹೊರಗಡೆ ಹೋಗಿ ಮಾತನಾಡಿ ಬಾ ಎಂದು ಎಚ್ಚರಿಸಿದರು.

ಕೂಡಗಿಯಲ್ಲಿರುವ 101 ಎಕರೆ ಕೆರೆ ಅತಿಕ್ರಮಣವಾಗುತ್ತಿದೆ. ಕೆಲವರು ಕೆರೆಯಲ್ಲಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಪಿಡಿಒ ಕೆರೆ ಹದ್ದುಬಸ್ತು ಅಳತೆ ಮಾಡಿಸಿ, ಅದು ಅತಿಕ್ರಮಣವಾಗದಂತೆ ನೋಡಿಕೊಂಡು ಕೆರೆ ಸಂರಕ್ಷಿಸಿಕೊಳ್ಳಬೇಕು.

-ಶಿವಾನಂದ ಪಾಟೀಲ, ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರದಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿ
ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿರುವ ಕಾಂಗ್ರೆಸ್‌ ಸರ್ಕಾರ