
ಕನ್ನಡಪ್ರಭ ವಾರ್ತೆ ಕಲಬುರಗಿ
ಜೆಸ್ಕಾಂ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಜೇವರ್ಗಿ ತಾಲೂಕಿನ ವಿವಿಧ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು ಕಾಮಗಾರಿ ವಿಳಂಬ ಸಹಿಸಲಾಗದು ಎಂದಿದ್ದಾರೆ
ಪರಿಶೀಲನೆ ಹೊತ್ತಲ್ಲಿ ಜೇವರ್ಗಿ, ಸುತ್ತಮುತ್ತ ಸಾರ್ವಜನಿಕರಿಗೆ ಅಪಾಯ ಉಂಟುಮಾಡುವಂತಿದ್ದ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ವಿದ್ಯುತ್ ಕಂಬಗಳನ್ನು ಗಮನಿಸಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅವುಗಳನ್ನು ತಕ್ಷಣವೇ ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರು.ಜೇವರ್ಗಿ ತಾಲೂಕಿನ ಕೂಡಿ ದರ್ಗಾದಲ್ಲಿರುವ 33/11 ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆಭೇಟಿ ನೀಡಿ, ಅಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆ, ನಿಯಂತ್ರಣ ಕೊಠಡಿ ಹಾಗೂ ತಾಂತ್ರಿಕ ಕಾರ್ಯವೈಖರಿಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಅಧ್ಯಕ್ಷರು ಪರಿಶೀಲಿಸಿದರು.
ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಎಚ್ಚರಿಸಲಾಯಿತು. ಮುಖ್ಯಮಂತ್ರಿಗಳ ಆದೇಶದಂತೆ ಪ್ರತಿಯೊಬ್ಬ ಫಲಾನುಭವಿಯ ಮನೆಗೂ ಭೇಟಿ ನೀಡಿ ‘ಗೃಹ ಜ್ಯೋತಿ’ ಯೋಜನೆಯ ಪರಿಶೀಲನೆ ನಡೆಸಲು, ಸಾರ್ವಜನಿಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಸಲು ಸೂಚನೆ ನೀಡಿದರು.
ಈಗಾಗಲೇ ಮಂಜೂರಾಗಿರುವ ಉಪಕೇಂದ್ರಗಳ ಹೊರತಾಗಿ, ವಿದ್ಯುತ್ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಅಗತ್ಯ ಪ್ರಸ್ತಾಪನೆಗಳನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಲಾಯಿತು.
ಎಲ್ಲಾ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗಕ್ಕೆ ತುರ್ತು ಕಾಮಗಾರಿಗಳಿಗಾಗಿ ಈಗಾಗಲೇ ಅಗತ್ಯ ಪ್ರಮಾಣದ ಟ್ರಾನ್ಸ್‌ಫಾರ್ಮರ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ನಿರ್ದೇಶನ ನೀಡಿದರು.