ಏತ ನೀರಾವರಿ ಯೋಜನೆಗೆ ಭೂಮಿ ನೀಡಿರುವ ಬಾಕಿ ರೈತರಿಗೆ ಕೂಡಲೇ ಸೂಕ್ತ ಪರಿಹಾರದ ಹಣ : ಶಾಸಕ ಎ.ಮಂಜು

KannadaprabhaNewsNetwork |  
Published : Aug 18, 2024, 01:56 AM ISTUpdated : Aug 18, 2024, 10:25 AM IST
17ಎಚ್ಎಸ್ಎನ್4 : ಅರಕಲಗೂಡು ತಾಲೂಕು ಅಡಿಕೆ ಬೊಮ್ಮನಹಳ್ಳಿ ಏತನೀರಾವರಿ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಮಂಜು ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಅಡಿಕೆ ಬೊಮ್ಮನಹಳ್ಳಿ ಏತನೀರಾವರಿ ಯೋಜನೆಗೆ ಭೂಮಿ ನೀಡಿರುವ ಬಾಕಿ ರೈತರಿಗೆ ಕೂಡಲೇ ಸೂಕ್ತ ಪರಿಹಾರದ ಹಣ ದೊರೆಯಲಿದೆ. ಹಣ ಬಿಡುಗಡೆಯಾಗಿದ್ದು ಭೂಮಿ ನೀಡಿರುವ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಎ.ಮಂಜು ತಿಳಿಸಿದರು.

 ಅರಕಲಗೂಡು :  ಅಡಿಕೆ ಬೊಮ್ಮನಹಳ್ಳಿ ಏತನೀರಾವರಿ ಯೋಜನೆಗೆ ಭೂಮಿ ನೀಡಿರುವ ಬಾಕಿ ರೈತರಿಗೆ ಕೂಡಲೇ ಸೂಕ್ತ ಪರಿಹಾರದ ಹಣ ದೊರೆಯಲಿದೆ. ಹಣ ಬಿಡುಗಡೆಯಾಗಿದ್ದು ಭೂಮಿ ನೀಡಿರುವ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಅಡಿಕೆಬೊಮ್ಮನಹಳ್ಳಿ ಏತನೀರಾವರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ, ಶಾಸಕರಾಗಿದ್ದ ಮಲ್ಲಪ್ಪನವರು ಮತ್ತು ಎಚ್.ಎನ್.ನಂಜೇಗೌಡರು ಸಂಸದರಾಗಿದ್ದ ಅವಧಿಯಲ್ಲಿ ಈ ಏತನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಸುಮಾರು ನಾಲ್ಕು ದಶಕಗಳ ಯೋಜನೆ ಇದಾಗಿದೆ. ಇನ್ನೂ ಕೂಡ 1500 ಎಕರೆ ಕೃಷಿ ಭೂಮಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಯಾಕೆಂದರೆ 150 ಎಕರೆಗೆ ಪರಿಹಾರದ ಹಣ ಕೊಡುವುದು ಬಾಕಿ ಇದೆ. ಈ ಸಲುವಾಗಿ ಮುಂದೆ ನೀರು ಹೋಗಲು ಸಾಧ್ಯವಾಗಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವರ್ಷ ನಿರೀಕ್ಷಿತವಾಗಿ ಮಳೆ ಬೀಳದ ಪರಿಣಾಮ ಸಮರ್ಪಕವಾಗಿ ಅಡಿಕೆ ಬೊಮ್ಮನಹಳ್ಳಿ, ಗಂಗನಾಳು ಏತನೀರಾವರಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಅವಧಿಗೆ ಮುನ್ನವೇ ನಮ್ಮ ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಭರ್ತಿಯಾಗಿರುವ ಪರಿಣಾಮ ಈಗಾಗಲೇ ಬಲಮೇಲ್ದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ. 

ಮಳೆಯಿಂದ ಈಗಾಗಲೇ ಶೇ.70ರಷ್ಟು ಕೆರೆಗಳಿಗೆ ನೀರು ಬಂದಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಜಲಾಶಯದಲ್ಲಿ ನೀರು ಇರುವ ಕಾರಣ ಕೆಲವು ತಿಂಗಳು ಕೆರೆ ಕಟ್ಟೆಗಳಿಗೆ ನೀರು ಹರಿಯಲಿದೆ. ಆತಂಕವಿಲ್ಲದೇ ಅರೆ ಕೃಷಿ ಬೆಳೆಗಳನ್ನು ಕೈಗೊಂಡು ರೈತರು ಆರ್ಥಿಕಾಭಿವೃದ್ಧಿಯನ್ನು ಹೊಂದಬೇಕೆಂದು ಮನವಿ ಮಾಡಿದರು.ತಾಲೂಕಿನ ಮಲ್ಲಿಪಟ್ಟಣ ಏತನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ 9 ಕೆರೆಗಳನ್ನು ಕೈಬಿಡಲಾಗಿತ್ತು. 

ಕಣಿಯಾರು ಗ್ರಾಮದಲ್ಲಿಯೂ ಸಹ ಎರಡನೇ ಲಿಫ್ಟ್‌ ಕಾರ್ಯ ಕೂಡ ಆರಂಭಗೊಳ್ಳಲಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿರುವ ಪರಿಣಾಮ ಆ ಸಮಸ್ಯೆಯೂ ಸಹ ಬಗೆಹರಿದಿದೆ. ಗಂಗನಾಳು ಏತನೀರಾವರಿ ಯೋಜನೆ ವ್ಯಾಪ್ತಿಯಲ್ಲಿಯೂ ಕೂಡ ಹಲವು ಕೆರೆಗಳಿಗೆ ನೀರು ಬರುತ್ತಿಲ್ಲವೆಂದು ರೈತರಿಂದ ದೂರು ಕೇಳಿಬಂದಿದೆ. ಇನ್ನೂ ಕೂಡ ಹಲವು ಕೆರೆಗಳಿಗೆ ಪೈಪ್‌ಲೈನ್‌ ಅಳವಡಿಕೆ ಆಗಿಲ್ಲ, ಈ ಬಗ್ಗೆಯೂ ಸಹ ಗಮನಕೊಟ್ಟು ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೇಮಾವತಿ ಬಲಮೇಲ್ದಂಡೆ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿಶ್ವನಾಥ್ ಮಾತನಾಡಿ, ಅಡಿಕೆಬೊಮ್ಮನಹಳ್ಳಿ ಏತನೀರಾವರಿ ಯೋಜನೆ ವ್ಯಾಪ್ತಿಗೆ 34 ಗ್ರಾಮಗಳ 70ಕ್ಕೂ ಹೆಚ್ಚು ಕೆರೆಗಳು ಬರುತ್ತವೆ. 

8500ಎಕರೆ ಅಚ್ಚುಕಟ್ಟು ಇದೆ. ಈಗಾಗಲೇ ಘೋಷಣೆಯಾಗಿರುವ ಅಚ್ಚುಕಟ್ಟು 6978 ಎಕರೆಯಾಗಿದೆ. ಎಡ ಶಾಖಾ ನಾಲೆ ಉದ್ದ 15.308 ಕಿ.ಮೀ, ಬಲಶಾಖೆ ನಾಲೆ ಉದ್ದ 12.632ಕಿ.ಮೀ ದೂರವಿದ್ದು, ಈ ಪೈಕಿ 5.50ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 8 ವಿತರಣಾ ನಾಲೆಗಳ ನೇರ ತೂಬುಗಳು ಇವೆ. 

89ಕ್ಯೂಸೆಕ್ಸ್ ನೀರು ಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳು ಸಹ ಈ ಬಾರಿ ತುಂಬಲಿವೆ. ಈಗಾಗಲೇ ಯೋಜನೆಗೆ ವಶಪಡಿಸಿಕೊಂಡಿರುವ 150 ಎಕರೆ ಜಮೀನಿಗೆ ಪರಿಹಾರ ನೀಡಲು ಯೋಜನೆ ಸಿದ್ಧಗೊಂಡಿದೆ. ಶೀಘ್ರ ರೈತರಿಗೆ ಪರಿಹಾರದ ಹಣ ಕೈಸೇರಲಿದೆ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಹೇಮಾವತಿ ಜಲಾಶಯ ವ್ಯಾಪ್ತಿಯ ಅಧೀಕ್ಷಕ ಎಂಜಿನಿಯರ್ ಜ್ಯೋತಿ, ಜಿ.ಕೆ.ಎಂಜಿನಿಯರ್‌ಗಳಾದ ಸಂತೋಷ್, ಶಿವರಾಜ್, ಮುಖಂಡರಾದ ನರಸೇಗೌಡ, ಕೃಷ್ಣೇಗೌಡ ಇತರರು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...