ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಒತ್ತಾಯ

KannadaprabhaNewsNetwork | Published : Aug 17, 2024 12:49 AM

ಸಾರಾಂಶ

ಕೃಷಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರು ಪಟ್ಟಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಕೃಷಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರಿಂದ ಧರಣಿ ಸತ್ಯಾಗ್ರಹ

ಕನ್ನಡಪ್ರಭ ವಾರ್ತೆ ಕಾರಟಗಿ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಹಾನಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜೊತೆಗೆ ಐಸಿಸಿ ಸಮಿತಿ ಅಧ್ಯಕ್ಷ ಸಚಿವ ಶಿವರಾಜ ತಂಗಡಗಿ ಕೂಡಾ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರು ಪಟ್ಟಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಇಲ್ಲಿನ ಪುರಸಭೆ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನವಲಿ ವೃತ್ತದಲ್ಲಿ ಕೆಲಕಾಲ ಧರಣಿ ಕುಳಿತ ಪ್ರತಿಭಟನಾಕಾರರು ಜಲಾಶಯದ ಗೇಟ್ ಹಾನಿಗೆ ಕಾರಣರಾದ ಮಂಡಳಿಯ ಅಧಿಕಾರಿಗಳು, ಐಸಿಸಿ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಮತ್ತು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ನಂತರ ಮೆರವಣಿಗೆ ವಿಶೇಷ ಎಪಿಎಂಸಿ ಆವರಣದಲ್ಲಿನ ಹಾಕಲಾಗಿದ್ದ ಪೆಂಡಾಲ್‌ನಲ್ಲಿ ಅನಿರ್ದಿಷ್ಟಾವಧಿಯ ಧರಣಿ ಆರಂಭಿಸಿದರು.

ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬಿಲ್ಗಾರ್ ಮಾತನಾಡಿ, ಕಾಲ ಕಾಲಕ್ಕೆ ಜಲಾಶಯದ ತಾಂತ್ರಿಕ ಸಮಿತಿಯ ಸಭೆ ಮಾಡಿ ಡ್ಯಾಂನ ಸುರಕ್ಷತೆ, ನಿರ್ವಹಣೆ ಬಗ್ಗೆ ಗಮನಹರಿಸಿದ್ದರೆ ಇವತ್ತು ರೈತರಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ತಾಂತ್ರಿಕವಾಗಿ ಮಾಹಿತಿ ಹೊಂದಿದ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಈ ಅಧಿಕಾರಿಗಳ ಮೇಲೆ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಒತ್ತಾಯಿಸಿದರು.

ಸಂಘದ ಕಲ್ಯಾಣ ಕರ್ನಾಟಕ ಘಟಕದ ಅಧ್ಯಕ್ಷ ಹನುಮಂತಪ್ಪ ಭೋವಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಗೋವಿಂದಪ್ಪ ಮಾತನಾಡಿದರು.

ಈ ವೇಳೆ ಮೋಹನ್ ಕುರಿ, ಮಲ್ಲಿಕಾರ್ಜುನ, ಹನುಮಂತ, ರಮೇಶ್ ಕಂಪ್ಲಿ, ಹನುಮನಗೌಡ, ಪಂಪನಗೌಡ ಆಕಳಕುಂಪಿ, ಹುಲಿಗೆಮ್ಮ ನಾಯಕ್, ರಾಜೇಶ್ವರಿ, ವೀರೇಶ್ ಮುಕ್ಕುಂದಾ ಮತ್ತು ಮಲ್ಲಪ್ಪ ವಜ್ರಬಂಡಿ, ಮಾರುತಿ ಇತರರಿದ್ದರು.

Share this article