ಕಾಮ್ರೇಡ್‌ ಬಯ್ಯಾರೆಡ್ಡಿ ಇನ್ನಿಲ್ಲ

KannadaprabhaNewsNetwork | Published : Jan 5, 2025 1:33 AM

ಸಾರಾಂಶ

ಸಿಪಿಐಎಂ ಪಕ್ಷದ ಕಾರ್ಯಕರ್ತರಾಗಿ ಮತ್ತು ನಾಯಕರಾಗಿ ತಮ್ಮ ಇಡೀ ಜೀವನ ಸಮಾಜದಲ್ಲಿನ ಬಡವರಿಗೆ ರೈತರಿಗೆ ಮುಡಿಪಾಗಿಟ್ಟಿದ್ದರು. ಅವರ ಅಗಲಿಕೆ ರಾಜ್ಯದ ರೈತ ಚಳುವಳಿಗೆ ಶೋಷಿತ ಸಮುದಾಯಕ್ಕೆ ಮತ್ತು ಮುಖ್ಯವಾಗಿ ಸಿಪಿಎಂಗೆ ಬಹುದೊಡ್ಡ ನಷ್ಟವಾಗಿದೆ. ರೈತರ, ಕಾರ್ಮಿಕರ, ಅಂಗನವಾಡಿ ಹಾಗೂ ನೀರಾವರಿ, ಅವಳಿ ಜಿಲ್ಲೆಗಳ ಅಭಿವೃದ್ದಿ ಪರವಾದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು

ಕನ್ನಡಪ್ರಭ ವಾರ್ತೆ ಕೋಲಾರ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಅಧ್ಯಕ್ಷ ಕಾಮ್ರೇಡ್ ಜೆ.ಸಿ.ಬಯ್ಯಾರೆಡ್ಡಿ(೬೪) ಶನಿವಾರ ಮುಂಜಾನೆ ೩.೩೦ರಲ್ಲಿ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ ಹಾಗೂ ಒಬ್ಬ ಪುತ್ರಿ ಇದ್ದಾರೆ.

ಚಿಂತಾಮಣಿ ತಾಲ್ಲೂಕಿನ ಗಡಿವಾರಪಲ್ಲಿ ಜಿ.ಸಿ.ಬಯ್ಯಾರೆಡ್ಡಿ ಕೋಲಾರದಲ್ಲಿ ಪದವಿ ಮುಗಿಸಿದ್ದು ವಿದ್ಯಾರ್ಥಿದೆಸೆಯಿಂದಲೇ ಸಿಪಿಎಂನಲ್ಲಿ ಗುರುತಿಸಿ ಕೊಂಡಿದ್ದರು. ಸಿಪಿಎಂ ಮುಖಂಡರಾಗಿದ್ದ ಪಿ.ವೆಂಕಟಗಿರಿಯಪ್ಪ, ಆರ್.ವಿ.ವೆಂಕಟರಾಮಯ್ಯ, ಕೃಷ್ಣಾರೆಡ್ಡಿ, ಶ್ರೀರಾಮರೆಡ್ಡಿ, ಕೆ.ಜಿ.ಎಫ್. ಮಣಿ ಮುಂತಾದವವರೊಂದಿಗೆ ಒಡನಾಟ ಹೊಂದಿದ್ದು, ಪಕ್ಷದ ಸಂಘಟನೆಗೆ ಶ್ರಮಿಸಿದ್ದರು. ರೈತರ, ಕಾರ್ಮಿಕರ, ಅಂಗನವಾಡಿ ಹಾಗೂ ನೀರಾವರಿ, ಅವಳಿ ಜಿಲ್ಲೆಗಳ ಅಭಿವೃದ್ದಿ ಪರವಾದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಸರ್ಕಾರದ ಗಮನ ಸೆಳೆದು ಅನೇಕ ಸೌಲಭ್ಯಗಳನ್ನು ಕೊಡಿಸುವಲ್ಲಿ ಯಶಸ್ವಿಯೂ ಆಗಿದ್ದರು.

ಸಿಪಿಎಂ, ಸಂಘಟನೆಗಳ ಶ್ರದ್ಧಾಂಜಲಿ

ಕರ್ನಾಟಕ ಪ್ರಾಂತ ರೈತ ಸಂಘ(ಕೆ.ಪಿ.ಆರ್.ಎಸ್) ರಾಜ್ಯ ಅಧ್ಯಕ್ಷ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ನಿಧನಕ್ಕೆ ನಗರದ ಮೆಕ್ಕೆ ವೃತ್ತದಲ್ಲಿ ಸಿಪಿಎಂ ಹಾಗೂ ಪ್ರಗತಿಪರ ಸಂಘಟನೆಗಳು ಶ್ರದ್ಧಾಂಜಲಿ ಸಲ್ಲಿಸಿದವು.

ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಜಿ.ಸಿ.ಬಯ್ಯಾರೆಡ್ಡಿ ವಿದ್ಯಾರ್ಥಿ ದೆಸೆಯಿಂದ ಹೋರಾಟದ ಕಣಕ್ಕೆ ಧುಮುಕಿದ್ದು ವಿದ್ಯಾರ್ಥಿ ಚಳವಳಿ ರಾಜ್ಯವ್ಯಾಪ್ತಿಯಾಗಿ ಮುನ್ನಡೆಸಿದ್ದಾರೆ. ಸಿಪಿಐಎಂ ಪಕ್ಷದ ಕಾರ್ಯಕರ್ತರಾಗಿ ಮತ್ತು ನಾಯಕರಾಗಿ ತಮ್ಮ ಇಡೀ ಜೀವನ ಸಮಾಜದಲ್ಲಿನ ಬಡವರಿಗೆ ರೈತರಿಗೆ ಮುಡಿಪಾಗಿಟ್ಟಿದ್ದರು. ಅವರ ಅಗಲಿಕೆ ರಾಜ್ಯದ ರೈತ ಚಳುವಳಿಗೆ ಶೋಷಿತ ಸಮುದಾಯಕ್ಕೆ ಮತ್ತು ಮುಖ್ಯವಾಗಿ ಸಿಪಿಎಂಗೆ ಬಹುದೊಡ್ಡ ನಷ್ಟವಾಗಿದೆ ಎಂದರು.ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಮಗ್ರತೆಗಾಗಿ ನಿರಂತರವಾಗಿ ದುಡಿದಿದ್ದಾರೆ ರೈತ ಚಳುವಳಿಯ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಸಂಘಗಳ ಮೂಲಕ ಅರಿವು ಪೋತ್ಸಾಹ ನೀಡಿದ್ದರು. ಅವರ ನಿಧನ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರುಕರ್ನಾಟಕ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಕೆ.ಪಿ.ಆರ್.ಎಸ್ ಜಿಲ್ಲಾಧ್ಯಕ್ಷ ಟಿ.ಎಂ ವೆಂಕಟೇಶ್, ಜೆಎಂಎಸ್ ವಿ.ಗೀತಾ, ಮಾಜಿ ತಾಪಂ ಅಧ್ಯಕ್ಷ ಸಿ.ಆರ್ ಯುವರಾಜ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಪತಿಯಪ್ಪ, ಮುಖಂಡ ಎಂ.ವಿ.ನಾರಾಯಣಸ್ವಾಮಿ, ಹೆಚ್.ಬಿ.ಕೃಷ್ಣಪ್ಪ, ಎನ್.ಎನ್.ಶ್ರೀರಾಮ್ ಮತ್ತಿತರರು ಇದ್ದರು.

Share this article