ಕರಾಟೆಯಿಂದ ಆತ್ಮರಕ್ಷಣೆಯೊಂದಿಗೆ ಏಕಾಗ್ರತೆ: ಡಾ.ಪುಷ್ಪಲತಾ ವೈದ್ಯ

KannadaprabhaNewsNetwork | Published : May 16, 2025 2:00 AM
ಪೊಟೋ ಪೈಲ್ : 15ಬಿಕೆಲ್1: | Kannada Prabha

ಸಾರಾಂಶ

ಕರಾಟೆ ಆತ್ಮರಕ್ಷಣೆ ಕಲೆಯೊಂದಿಗೆ ಏಕಾಗ್ರತೆಯನ್ನು ಕಲಿಸುತ್ತಿದೆ.

ಭಟ್ಕಳ: ಕರಾಟೆ ಆತ್ಮರಕ್ಷಣೆ ಕಲೆಯೊಂದಿಗೆ ಏಕಾಗ್ರತೆಯನ್ನು ಕಲಿಸುತ್ತಿದೆ. ಪಾಲಕರು ಮಕ್ಕಳಿಗೆ ಕರಾಟೆಯಂತಹ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡುತ್ತಿರುವುದು ಸಂತಸದ ಸಂಗತಿ ಎಂದು ಬೀನಾ ವೈದ್ಯ ಎಜ್ಯುಕೇಶನ್ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕಿ ಡಾ. ಪುಷ್ಪಲತಾ ವೈದ್ಯ ಹೇಳಿದರು.ಅವರು ಪಟ್ಟಣದ ಚೌತನಿಯ ಕುದುರೆ ಬೀರಪ್ಪ ಸಭಾಭವನದಲ್ಲಿ ನಡೆದ ಶೋಟೋಕಾನ್ ಕರಾಟೆ ಇನ್ಸಿಟ್ಯೂಟ್ ಇದರ ೧೨ನೇ ಬ್ಲ್ಯಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಮ್ಮನ್ನು ತಾವು ನಿಗ್ರಹಿಸಿಕೊಂಡು ಒಂದು ಸಾರ್ಥಕತೆಯನ್ನು ಪಡೆಯುವಲ್ಲಿ ಮಾರ್ಷಲ್ ಆರ್ಟ್ಸ್‌ ಸಹಕಾರಿ. ಇದನ್ನು ಕರಗತಮಾಡಿಕೊಂಡು ೨೨ವಿದ್ಯಾರ್ಥಿಗಳು ಕರಾಟೆ ಬ್ಲ್ಯಾಕ್ ಬೆಲ್ಟ್ ಪಡೆದು ಸಾಧನೆ ಮಾಡಿರುವುದು ಅಭಿನಂದನಾರ್ಹ. ಮಕ್ಕಳಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾವಳಿ ನಡೆಯುತ್ತವೆ. ಇದರಲ್ಲಿ ಭಾಗವಹಿಸಿಲು ನಾವು ಪ್ರೇರೇಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಮಾತನಾಡಿ, ಮಕ್ಕಳಿಗೆ ಸಣ್ಣ ಮೌಲ್ಯಗಳ ಕುರಿತು ಅರಿವು ಮೂಡಿಸಬೇಕು. ಮಕ್ಕಳ ಎದುರು ಪಾಲಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ವಾರದಲ್ಲಿ ಒಂದು ದಿನವಾದರೂ ಮಕ್ಕಳನ್ನು ಮಂದಿರಕ್ಕೆ ಕರೆದುಕೊಂಡು ಹೋಗುವ ಪರಿಪಾಠ ಬೆಳೆಸಬೇಕು. ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.

ಪತ್ರಕರ್ತ ರಾಮಚಂದ್ರ ಕಿಣಿ, ವಿದ್ಯಾಭಾರತಿ ಶಾಲೆಯ ಮುಖ್ಯಶಿಕ್ಷಕಿ ರೂಪಾ ರಮೇಶ ಖಾರ್ವಿ, ಡಾ. ಕಮಲಾ ನಾಯಕ, ವಕೀಲ ರಾಜೇಶ ನಾಯ್ಕ ಮಾತನಾಡಿದರು. ಕುದುರೆ ಬೀರಪ್ಪ ದೇವಸ್ಥಾನದ ಭೂದಾನ ಸಮಿತಿ ಅಧ್ಯಕ್ಷ ವೆಂಕಟೇಶ ನಾಯ್ಕ, ಹನ್ಸಿ ಸಿ ರಾಜನ್ ೨೨ ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಪ್ರದಾನ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.

ಬ್ಲ್ಯಾಕ್ ಬೆಲ್ಟ್ ಪಡೆದ ವಿದ್ಯಾರ್ಥಿಗಳು ವಿವಿಧ ಸಾಹಸಮಯ ಪ್ರದರ್ಶನ ನೀಡಿ ಜನರನ್ನು ರೋಮಾಂಚನಗೊಳಿಸಿದರು. ಕರಾಟೆ ಶಿಕ್ಷಕರಾದ ಸುರೇಶ ಮೊಗೇರ, ನಾಗರಾಜ ದೇವಾಡಿಗ, ಆರ್ಯನ್ ವಾಸು ನಾಯ್ಕ, ರಾಜಶೇಖರ ಗೌಡ, ಮಂಜುನಾಥ ದೇವಾಡಿಗ, ಪ್ರವೀಣ ಹರಿಜನ, ವಿನೋದ ಗೊಂಡ, ಗೋಪಾಲ ನಾಯ್ಕ, ಅಂಜಲಿ ಕಾಮತ ಕಾರ್ಯಕ್ರಮ ನಿರ್ವಹಿಸುವಲ್ಲಿ ಸಹಕರಿಸಿದರು.

PREV