ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರಿ ಧೋರಣೆ ವಿರುದ್ಧ ಮೇ 17ರಂದು ಮಂಡ್ಯದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ‘ಪ್ರತಿಭಟನಾ ಸಮಾವೇಶ’ ನಡೆಸಿ ಮಹೇಶ್ ಜೋಶಿ ತೊಲಗಿಸಿ ಕಸಾಪ ಉಳಿಸಿ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಂಡ್ಯ ಘಟಕದ ಮಾಜಿ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಮಾವೇಶದಲ್ಲಿ ಸಾಹಿತಿಗಳಾದ ದೇವನೂರು ಮಹಾದೇವ, ಹಿ.ಶಿ.ರಾಮಚಂದ್ರೇಗೌಡ ಸೇರಿದಂತೆ ಹಲವಾರು ಹಿರಿಯ ಸಾಹಿತಿಗಳು ಭಾಗವಹಿಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಸೇರಿದಂತೆ ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಕೆಲವು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಭಾಗವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ನೀಡಿದ್ದ 30 ಕೋಟಿ ಅನುದಾನದಲ್ಲಿ 2.5 ಕೋಟಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಪಡೆದಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಮತ್ತು ಸ್ವಾಗತ ಸಮಿತಿಯು 27.50 ಕೋಟಿಗೆ ಕೆಎಸ್ಎಂಸಿ ಮತ್ತು ಎ ಅಡಿಯಲ್ಲಿ ವೆಚ್ಚ ಮಾಡಿದ ಲೆಕ್ಕ ಪತ್ರಗಳನ್ನು ನೀಡಿದ್ದಾರೆ. ಆದರೆ, ಮಹೇಶ್ ಜೋಶಿ 2.50 ಕೋಟಿಗೆ ಲೆಕ್ಕ ನೀಡದೆ, 6 ತಿಂಗಳ ನಂತರ ಕೊಡುತ್ತೇನೆ ಎಂದು ಉದ್ಧಟತನ ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.
ಕಸಾಪ ಆಜೀವ ಸದಸ್ಯತ್ವ ಪಡೆದು ಕನ್ನಡ ಸೇವೆ ಮಾಡುತ್ತಿರುವ ಸದಸ್ಯರನ್ನು ಹಾಗೂ ಚುನಾಯಿತ ಸದಸ್ಯರನ್ನು ಕಸಾಪ ಅಧ್ಯಕ್ಷ ಜೋಶಿ ಅವರು ಷೋಕಾಸ್ ನೋಟಿಸ್ ನೀಡಿ ಸದಸ್ಯತ್ವ ರದ್ದುಪಡಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅನ್ಯಾಯ. ತಕ್ಷಣವೇ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ 108 ವರ್ಷಗಳ ಇತಿಹಾಸದಲ್ಲಿ ಯಾವ ಅಧ್ಯಕ್ಷರೂ ದಿನಭತ್ಯೆ, ವೇತನ ಪಡೆಯದೆ ಸಾಹಿತ್ಯ ಸೇವೆ ಮಾಡಿದ್ದಾರೆ. ಆದರೆ, ಮಹೇಶ ಜೋಶಿ ಅವರೇ ಸಿದ್ಧಪಡಿಸಿರುವ ಜಮಾ ಖರ್ಚಿನ ವಿವರದಲ್ಲಿ ಲೋಪದೋಷಗಳಿದ್ದು ಆರ್ಥಿಕ ಅಶಿಸ್ತು ಎದ್ದು ಕಾಣುತ್ತಿದೆ. ಸಾಹಿತ್ಯ ಸೇವೆಗೆ ದುಬಾರಿ ಎನಿಸುವಷ್ಟು ದಿನಭತ್ಯೆ, ವೇತನ ಪಡೆಯುವುದು ಸರಿಯೇ ಎಂದು ಪ್ರಶ್ನಿಸಿದರು.
ಅಧ್ಯಕ್ಷರ ವೇತನ 4.20 ಲಕ್ಷ, ದಿನಭತ್ಯೆ 7.62 ಲಕ್ಷ, ಪ್ರಯಾಣ ವೆಚ್ಚ 6.70 ಲಕ್ಷ, ವಾಹನ ನಿರ್ವಹಣೆ 93 ಸಾವಿರ, ಮನೆಯ ದಿನಪತ್ರಿಕೆಗಳ ವೆಚ್ಚ- 33 ಸಾವಿರ, ದೂರವಾಣಿ, ಮೊಬೈಲ್ ಕರೆಗಳ ವೆಚ್ಚ-43 ಸಾವಿರ, ಕಾರು ಇಂಧನ ವೆಚ್ಚ-18 ಸಾವಿರ ಸೇರಿದಂತೆ ಒಟ್ಟು 22 ಲಕ್ಷ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.ಸಂಘಟಕ ಕಾರಸವಾಡಿ ಮಹದೇವ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಯಕಾರಿ ಸಮಿತಿ, ಜೋಶಿ ಅವರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ. ಅವರ ನಡವಳಿಕೆಗಳು, ಧೋರಣೆಗಳ ಬಗ್ಗೆಯಷ್ಟೇ ನಮ್ಮ ಹೋರಾಟವಿದೆ. ಪ್ರಜಾಪ್ರಭುತ್ವದ ಹಾದಿ ಬಿಟ್ಟು ಅಧ್ಯಕ್ಷರು ನಡೆಯುತ್ತಿರುವುದಕ್ಕೆ ಸೀಮಿತವಾಗಿ ಚಳವಳಿ ನಡೆಸಲಾಗುತ್ತಿದೆ. 110 ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ಹಾದಿಯಲ್ಲಿ ಯಾವೊಬ್ಬ ಅಧ್ಯಕ್ಷರೂ ಇಂತಹ ಧೋರಣೆಯನ್ನು ತಳೆದಿರಲಿಲ್ಲ ಎಂದು ಹೇಳಿದರು.
ಕನ್ನಡದ ಬೆಳವಣಿಗೆ ಬಗ್ಗೆ, ಭಾಷೆಯ ಶ್ರೇಷ್ಠತೆಯನ್ನು ಕಾಪಾಡುವ, ಕನ್ನಡಿಗರ ಮೇಲಿನ ದೌರ್ಜನ್ಯದ ವಿರುದ್ಧ ದನಿ ಎತ್ತುವ, ಗಡಿ ಸಮಸ್ಯೆ, ಕನ್ನಡ ಶಾಲೆ ಮುಚ್ಚುತ್ತಿರುವ ಬಗ್ಗೆ ಜೋಶಿ ವಹಿಸಿರುವ ಪಾತ್ರವಾದರೂ ಏನೆಂದು ಪ್ರಶ್ನಿಸಿದ ಅವರು, ದತ್ತಿ, ಸಮ್ಮೇಳನ ಹೊರತುಪಡಿಸಿದರೆ ರಾಜ್ಯಾಧ್ಯಕ್ಷ ಜೋಶಿಗೆ ಭಾಷೆಯನ್ನು ಬೆಳೆಸುವ ಬಗ್ಗೆ ಚಿಂತೆಯೇ ಇಲ್ಲ ಎಂದು ದೂಷಿಸಿದರು.2023–24ನೇ ಸಾಲಿನ ವಾರ್ಷಿಕ ವರದಿಯಲ್ಲಿ ಮತ್ತು ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿಗಳ ಬಗ್ಗೆ, ಕಟ್ಟಡ ನವೀಕರಣದ ಬಗ್ಗೆ ಇನ್ನಿತರ ಲೋಪದೋಷಗಳನ್ನು ಈಗಾಗಲೇ ಎತ್ತಿ ಹಿಡಿದಿದ್ದಾರೆ. ಇದಕ್ಕೆ ಅಧ್ಯಕ್ಷರು ಸರಿಯಾದ ಉತ್ತರ ನೀಡದೆ ಮುಂದೆ ಸರಿಪಡಿಸಿಕೊಳ್ಳುತ್ತೇನೆ ಎಂಬ ತಾತ್ಸಾರದ ಮಾತುಗಳನ್ನು ಆಡಿದ್ದಾರೆ. ಅವ್ಯವಹಾರ ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ, ನಿಖರವಾದ ಮಾಹಿತಿ ಕೊಡಬೇಕು ಎಂದು ಹೋರಾಟ ಮಾಡುತ್ತೇವೆ ಎಂದು ಮಹದೇವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕಾಡಯ್ಯ, ಸಿದ್ದರಾಮು, ಲೋಕೇಶ್ ಮೌರ್ಯ, ಸುರೇಶ್ ಇದ್ದರು.15ಕೆಆರ್ ಎಂಎನ್ 2.ಜೆಪಿಜಿ
ರಾಮನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಂಡ್ಯ ಘಟಕದ ಮಾಜಿ ಜಿಲ್ಲಾಧ್ಯಕ್ಷ ಡಿ.ಪಿ. ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.