ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 90ನೇ ಪುಸ್ತಕ ಹಾಗೂ ಲೇಖಕಿ ಯಶೋಧ ಪೇರಿಯಂಡ ಅವರ ಎರಡನೇ ಪುಸ್ತಕ ‘ಮಕ್ಕಕ್ ಕೊದಿಮೊದ’ ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ, ಕಥೆ, ಕವನ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಆದರೆ ಬರಹಗಾರರಿಗಷ್ಟೇ ಆಸಕ್ತಿ ಇದ್ದರೆ ಸಾಲದು. ಓದುಗರ ಸಂಖ್ಯೆಯೂ ಹೆಚ್ಚಾಗಬೇಕು. ಇಂದು ಮೊಬೈಲ್ ನಲ್ಲೇ ಕಾಲಕಳೆಯುವ ಹೆಚ್ಚು ಮಂದಿ ಇದ್ದಾರೆ, ಜ್ಞಾನಾರ್ಜನೆಗೆ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.‘ಮಕ್ಕಕ್ ಕೊದಿಮೊದ’ ಕೊಡವ ಪುಸ್ತಕದ ಲೇಖಕಿ ಯಶೋಧ ಪೇರಿಯಂಡ ಮಾತನಾಡಿ, ಹಿಂದಿನ ಕಾಲದಲ್ಲಿ ಪುಸ್ತಕ ಓದುಗರ ಸಂಖ್ಯೆ ಹೆಚ್ಚಿತ್ತು. ಅಲ್ಲದೇ ತಂದೆ, ತಾಯಂದಿರು, ಅಜ್ಜ, ಅಜ್ಜಿಯಂದಿರು ಮಕ್ಕಳಿಗೆ ಕಥೆಯನ್ನು ಹೇಳಿಕೊಡುವ ರೂಢಿ ಇತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್, ಟಿ.ವಿ ಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾಗಮಂಡಲ ಶ್ರೀ ಇಗ್ಗುತ್ತಪ್ಪ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ನೇತೃತ್ವದಲ್ಲಿ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸರ್ಕಾರದ ಯಾವುದೇ ಅನುದಾನವಿಲ್ಲದೆ 90 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿರುವುದು ಶ್ಲಾಘನೀಯ ಎಂದರು.
ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟದ ವತಿಯಿಂದ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ 90 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು, 100ನೇ ಪುಸ್ತಕಕ್ಕೆ ಬರಹಗಾರರಿಂದ ಲೇಖನಗಳನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.
ಆಸಕ್ತ ಬರಹಗಾರರು ಯಾವುದೇ ಜಾತಿ, ಮತ, ಭೇದವಿಲ್ಲದೆ ತಮ್ಮ ಬರಹಗಳನ್ನು ಟೈಪ್ ಮಾಡಿ ಅಥವಾ ಬರೆದು ಕೊಡವ ಮಕ್ಕಡ ಕೂಟ, ಕೆ.ಬಾಡಗ, ಎಫ್.ಎಂ.ಕೆ.ಎಂ..ಸಿ ಕಾಲೇಜು ಪೋಸ್ಟ್, ಮಡಿಕೇರಿ, ಕೊಡಗು ಈ ವಿಳಾಸಕ್ಕೆ ಅಥವಾ ಬೊಳ್ಳಜಿರ ಬಿ.ಅಯ್ಯಪ್ಪ 9880778074 ಮೊ. ಸಂಖ್ಯೆಗೆ ವಾಟ್ಸ್ ಅಪ್ ಮಾಡಬಹುದು. ಲೇಖನಗಳನ್ನು ಜೂ. 30ರೊಳಗೆ ಕಳುಹಿಸಿ ಕೊಡಬಹುದಾಗಿದೆ ಎಂದು ಅಯ್ಯಪ್ಪ ತಿಳಿಸಿದರು.