ಸಮಾಜದ ಏಳಿಗೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಶ್ರೀಗಳ ಪವಿತ್ರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದರು. ಬೆಂಗಳೂರಿನ ಮಹಿಳೆಯೊಬ್ಬರನ್ನು ಮುಂದಿಟ್ಟುಕೊಂಡು ಮಾಡಲಾಗಿರುವ ಈ ಆರೋಪ ಕೇವಲ ಸುಳ್ಳಿನ ಕಂತೆಯಾಗಿದೆ.
ಕುಂದಗೋಳ:
ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಕೂಡಲಸಂಗಮ ಪೀಠದ ಮಾಜಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ಹಾಗೂ ದೈಹಿಕ, ಮಾನಸಿಕ ದೌರ್ಜನ್ಯದ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಶ್ರೀಗಳ ತೇಜೋವಧೆ ಮಾಡುವ ವ್ಯವಸ್ಥಿತ ಸಂಚು ನಡೆದಿದೆ ಎಂದು ಕುಂದಗೋಳ ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಡಾ. ಅರವಿಂದ ಕಟಗಿ, ಸಮಾಜದ ಏಳಿಗೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಶ್ರೀಗಳ ಪವಿತ್ರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದರು. ಬೆಂಗಳೂರಿನ ಮಹಿಳೆಯೊಬ್ಬರನ್ನು ಮುಂದಿಟ್ಟುಕೊಂಡು ಮಾಡಲಾಗಿರುವ ಈ ಆರೋಪ ಕೇವಲ ಸುಳ್ಳಿನ ಕಂತೆಗಳಾಗಿದ್ದು, ಇಂತಹ ಹೀನಕೃತ್ಯ ಸಮಾಜವು ಎಂದಿಗೂ ಸಹಿಸದು ಎಂದರು.
ಕುಂದಗೋಳ ತಾಲೂಕಿನ ಸಮಸ್ತ ಸಮಾಜ ಬಾಂಧವರು ಶ್ರೀಗಳ ಬೆನ್ನಿಗೆ ದೃಢವಾಗಿ ನಿಂತಿದ್ದೇವೆ. ಒಂದು ವೇಳೆ ಈ ಅಪಪ್ರಚಾರ ತಕ್ಷಣ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಸಮಾಜದ ಅಧ್ಯಕ್ಷ ನಾಗರಾಜ ದೇಶಪಾಂಡೆ ಮಾತನಾಡಿ, ಶ್ರೀಗಳ ವಿರುದ್ಧದ ಇಂತಹ ಧೋರಣೆ ಸಹಿಸಲು ಸಾಧ್ಯವಿಲ್ಲ. ತಪ್ಪುಗಳಾಗಿದ್ದರೆ ತನಿಖೆಯಾಗಲಿ, ಆದರೆ, ಉದ್ದೇಶಪೂರ್ವಕವಾಗಿ ಮಹಿಳೆಯೊಬ್ಬರಿಂದ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪ ಹೊರಿಸುತ್ತಿರುವುದು ಸರಿಯಲ್ಲ. ಹೋರಾಟದ ಹಾದಿ ತಪ್ಪಿಸಲು ಮಾಡಿರುವ ಸಂಚು ಇದು ಎಂದು ಹೇಳಿದರು. ಪಂಚಮಸಾಲಿ ಸಮಾಜವು ಶ್ರೀಗಳೊಂದಿಗೆ ಸದಾ ಇರಲಿದ್ದು, ಈ ಅಪಪ್ರಚಾರ ಮುಂದುವರಿದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಸಮಾಜದ ಮುಂಖಡ ಬಸವರಾಜ ನಾವಳ್ಳಿ, ಶ್ರೀಗಳ ತೇಜೋವಧೆಯ ಹಿಂದೆ ಶಾಸಕ ವಿಜಯಾನಂದ ಕಾಶಪ್ಪನವರ ಕೈವಾಡ ಇದೆ ಎಂದು ಆರೋಪಿಸಿದರು.
ಸಮಾಜದ ಮತ್ತೋರ್ವ ಮುಖಂಡರಾದ ವೆಂಕಟಪ್ಪ ಕಂಟೆಪ್ಪಗೌಡ ಹಾಗೂ ಗುರುಪಾದಪ್ಪ ಬಂಕದ, ಸಿದ್ದಪ್ಪ ಇಂಗಳಳ್ಳಿ, ಬಸವರಾಜ ಸಿರಸಂಗಿ, ಪ್ರಭುಗೌಡ ಶಂಕಾಗೌಡಶ್ಯಾನಿ, ದೇವಪ್ಪ ಇಚ್ಚಂಗಿ, ವೆಂಕನಗೌಡ ಕಂಟೆಪ್ಪಗೌಡ, ಮಲ್ಲಪ್ಪ ನರೇಗಲ್, ಯಲ್ಲಪ್ಪ ಶಿಗ್ಗಾವಿ, ಶಂಕರಗೌಡ ಹೀರೇಗೌಡ್ರ, ಗುರುಸಿದ್ದಪ್ಪ ಬಾಗಲ್, ಮಂಜು ಕಾಲವಾಡ, ಲವಪ್ಪ ಯಲಿವಾಳ, ವೈ.ಎನ್. ಪಾಟೀಲ, ಶಿವಾನಂದ ದೇಸಾಯಿ, ಯಲ್ಲಪ್ಪ ಸವಣೂರ, ದೇವಿಂದ್ರಪ್ಪ ಮೋರೋಪಂತರ ಸೇರಿದಂತೆ ಸಮಾಜದ ಹಿರಿಯರು ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.