ದಲಿತರ ಮೇಲಿನ ದೌರ್ಜನ್ಯಗಳ ಖಂಡನೆ, ಸೂಕ್ತ ಕ್ತಮಕ್ಕಾಗಿ ಆಗ್ರಹ

KannadaprabhaNewsNetwork |  
Published : Sep 22, 2026, 02:15 AM IST
ಹಗರಿಬೊಮ್ಮನಹಳ್ಳಿಯಲ್ಲಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಪದಾಧಿಕಾರಿಗಳು ಉಪ ತಹಸೀಲ್ದಾರ್ ಶಿವಕುಮಾರಗೌಡ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ದಲಿತ ಕುಟುಂಬಗಳ ಮೇಲಿನ ದೌರ್ಜನ್ಯಕ್ಕೆ ಕಾನೂನನ್ನು ಬಿಗಿಗೊಳಿಸಬೇಕು.

ಹಗರಿಬೊಮ್ಮನಹಳ್ಳಿಯಲ್ಲಿ ಜನವಾದಿ ಮಹಿಳಾ ಸಂಘನಟನೆಯಿಂದ ಮನವಿ

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ದಲಿತ ಕುಟುಂಬಗಳ ಮೇಲಿನ ದೌರ್ಜನ್ಯಕ್ಕೆ ಕಾನೂನನ್ನು ಬಿಗಿಗೊಳಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಸರ್ದಾರ್ ಹುಲಿಗೆಮ್ಮ ಆಗ್ರಹಿಸಿದರು.

ಹೆಚ್ಚುತ್ತಿರುವ ದಲಿತರು ಹಾಗೂ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಸೋಮವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಪದಾಧಿಕಾರಿಗಳು ತಾಲೂಕು ಆಡಳಿತ ಸೌಧದ ಬಳಿ ನಡೆಸಿದ ಧರಣಿಯ ನೇತೃತ್ವ ವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನ ಒಂಟಿ ಮಹಿಳೆಯರು ಸಾಮಾಜಿಕವಾಗಿ ಬಹುದೊಡ್ಡ ಕ್ಷೋಭೆಗೊಳಗಾಗಿದ್ದಾರೆ. ವಸತಿ ಹಾಗೂ ಮಾಸಾಶನದಿಂದ ವಂಚಿತ ಒಂಟಿ ಮಹಿಳೆಯರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ಹೇಳಿದರು.

ಇತ್ತೀಚಿಗೆ ದಲಿತರ ಮೇಲಿನ ದೌರ್ಜನ್ಯಗಳು ಮತ್ತು ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳು ನಿರಂತರವಾಗಿವೆ. ದಲಿತ ವಿರೋಧಿ ಶಕ್ತಿಗಳಿಗೆ ಸರ್ಕಾರ ಶರಣಾಗಿರುವುದು ಹಾಗೂ ಪಾಳೆಗಾರಿಕೆ ವಿಚಾರಗಳು ಅಟ್ಟಹಾಸಗೈಯುತ್ತಿರುವುದು ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಯಚೂರಿನಲ್ಲಿ ಭೂಮಾನಂದ ಎಂಬ ದಲಿತ ಯುವಕ ಭೂಮಾಲೀಕರ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿದ್ದಾನೆ. ಇದೇ ಜಿಲ್ಲೆಯ ಸಿರಿವಾರದಲ್ಲಿ ಬಹಿರ್ದೆಸೆಗೆ ತೆರಳಿದ್ದ ದಲಿತ ಯುವತಿ ಅತ್ಯಾಚಾರಕ್ಕೀಡಾಗಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಎರಡೂ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಜರುಗಿಸುವ ಜತೆಗೆ ಎರಡೂ ಕುಟುಂಬಗಳಿಗೆ ತಲಾ ₹೫೦ ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಲೋಕಪ್ಪನಹೊಲ ಗ್ರಾಮದಲ್ಲಿ ವಿಧವೆಯರು ಸಹಿತ ಗಂಡನಿಂದ ಪರಿತ್ಯಕ್ತರಾದ ನೂರಾರು ಒಂಟಿ ಮಹಿಳೆಯರು ಸಾಮಾಜಿಕ ಶೋಷಣೆಗೊಳಗಾಗಿದ್ದಾರೆ. ಕೂಲಿ ಇಲ್ಲದೇ ಬದುಕು ದುಸ್ತರವಾಗಿದೆ. ಇವರಿಗೆ ನಿವೇಶನ ಸಹಿತ ವಸತಿ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ್ದರೂ ಬೇಡಿಕೆಗಳು ಈಡೇರಿಲ್ಲ. ಗ್ರಾಮನ ಪಂಚಾಯಿತಿಯ ಎರಡು ಎಕರೆ ಭೂಮಿಯಲ್ಲಿ ನಿವೇಶನಗಳನ್ನು ರೂಪಿಸಿ ಅರ್ಹರಿಗೆ ವಿತರಿಸಬೇಕು ಎಂದು ಕೋರಿದರು.

ಕಳೆದ ಆರು ತಿಂಗಳಿನಿಂದ ಸ್ಥಗಿತಗೊಂಡಿರುವ ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ಮಾಸಾಶನದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಆನಂತರ ಉಪ ತಹಸೀಲ್ದಾರ್ ಶಿವಕುಮಾರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷೆ ಪೆದ್ದಮ್ಮ, ಸಹ ಕಾರ್ಯದರ್ಶಿ ಅಂಬಿಕಾ ಹಾಗೂ ಪದಾಧಿಕಾರಿಗಳಾದ ಹನುಮಂತಮ್ಮ, ದುರುಗಮ್ಮ, ಪಿ. ನಾಗಮ್ಮ, ಶಾರದಮ್ಮ, ಉಪ್ಪಾರ ಹನುಮವ್ವ, ಐನಳ್ಳಿ ಹನುಮವ್ವ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ನಾಳೆ ಬೃಹತ್ ರಕ್ತದಾನ ಶಿಬಿರ
ಸಮಾಜಮುಖಿ ಚಿಂತನೆ, ಅಭಿವೃದ್ಧಿಗೆ ಸದಾಕಾಲ ಮನ್ನಣೆ: ಸಂಸದ ಬೊಮ್ಮಾಯಿ