ದೆಹಲಿಯಲ್ಲಿ ರೈತರ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯಕ್ಕೆ ಖಂಡನೆ

KannadaprabhaNewsNetwork |  
Published : Mar 01, 2024, 02:20 AM IST
೨೯ಎಚ್‌ವಿಆರ್೩- | Kannada Prabha

ಸಾರಾಂಶ

ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ತಾಲೂಕು ಘಟಕದಿಂದ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ರೈತರು ಬೆಳೆದ ಬೆಳೆಗೆ ಕಾನೂನಾತ್ಮಕ (ಎಂಎಸ್‌ಪಿ) ಬೆಲೆ ನೀಡುವಂತೆ ಒತ್ತಾಯಿಸಿ ನೂರಾರು ರೈತ ಸಂಘಟನೆಗಳು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ತಾಲೂಕು ಘಟಕದಿಂದ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾವೇರಿ ತಾಲೂಕಿನಲ್ಲಿ ಅನಾವೃಷ್ಟಿಯಿಂದಾಗಿ ಭೀಕರ ಬರಗಾಲ ಆವರಿಸಿದ್ದು, ರೈತರು ಎರಡೆರಡು ಬಾರಿ ಬಿತ್ತನೆ ಮಾಡಿ ಸಾಲಕ್ಕೆ ಸಿಲುಕಿ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಹಾಯಕ್ಕೆ ಬಾರದೆ ಲೋಕಸಭಾ ಚುನಾವಣೆ ಗುಂಗಿನಲ್ಲಿ ಕಾಲಹರಣ ಮಾಡುತ್ತಿವೆ ಎಂದು ರೈತ ಮುಖಂಡರು ದೂರಿದರು.

ಇನ್ಶೂರೆನ್ಸ್ ಕಂಪನಿಯವರು ಮುಂಗಾರು ಮತ್ತು ಹಿಂಗಾರು ಬೆಳೆಗಳ ಅಣೇವಾರು ಮಾಡುವಾಗ ರೈತರಿಗೆ ತಿಳಿಸದೆ ತಮಗೆ ತೋಚಿದಂತೆ ಅಣೇವಾರು ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಬೇಕು. ಹಾವೇರಿ ತಾಲೂಕಿನ ಹಾಲು ಉತ್ಪಾದಕ ರೈತರಿಗೆ ಸರ್ಕಾರದ ₹೫ ಪ್ರೋತ್ಸಾಹಧನ ಕಳೆದ ೧೦ ತಿಂಗಳಿನಿಂದ ಬಿಡುಗಡೆ ಮಾಡಿಲ್ಲ. ಕೂಡಲೇ ರೈತರಿಗೆ ೧೦ ತಿಂಗಳ ಪ್ರೋತ್ಸಾಹಧನ ನೀಡಬೇಕು. ಹಾವೇರಿ ಜಿಲ್ಲಾ ಮೇಗಾ ಡೇರಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ತ್ವರಿತವಾಗಿ ಕಟ್ಟಡ ಕಾಮಗಾರಿ ಮುಗಿಸಿ ಅರ್ಹರಿಗೆ ಕೆಲಸ ನೀಡಬೇಕು. ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ₹೨೫ ಸಾವಿರ ಪರಿಹಾರ ನೀಡಬೇಕು. ಬರಗಾಲದಿಂದ ಆರ್ಥಿಕ ಸಮಸ್ಯೆ ಉಂಟಾಗಿದ್ದು ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಮತ್ತು ಇತರೆ ಯೋಜನೆಗಳಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ರೈತರ ಹೆಸರಿನಲ್ಲಿ ಬಿಲ್ ತೆಗೆಯಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ೨೦೨೩-೨೪ರ ಮಧ್ಯಂತರ ಬೆಳೆ ವಿಮೆ ಶೇ.೨೫ರಷ್ಟು ಮಂಜೂರು ಮಾಡಿ ಉಳಿದ ಹಣ ನೀಡಲು ಮೀಮಮೇಷ ಮಾಡುತ್ತಿದ್ದಾರೆ. ಕೂಡಲೇ ರೈತರಿಗೆ ಉಳಿದ ಬೆಳೆ ವಿಮೆ ಮಂಜೂರು ಮಾಡಬೇಕು. ಹೆಸ್ಕಾಂನವರು ರೈತರಿಂದ ಅಕ್ರಮ ಸಕ್ರಮ ಯೋಜನೆಯಡಿ ಹಣ ತುಂಬಿಸಿಕೊಂಡಿದ್ದು ತಕ್ಷಣ ಕಂಬ, ಟಿಸಿ ಒದಗಿಸಬೇಕು. ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಹಾವೇರಿ ತಾಲೂಕಿನ ೮೮ ಗ್ರಾಮಗಳ ಪೈಕಿ ೪೦-೫೦ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ದನ ಕರುಗಳಿಗೆ ಮೇವಿನ ಅಭಾವ ಆಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಹೊಲ ನಮ್ಮ ದಾರಿ ಯೋಜನೆ ಹಾವೇರಿ ತಾಲೂಕಿಗೆ ಕಾಗದದಲ್ಲಿ ಮಾತ್ರ ಆದೇಶ ಆಗಿದೆ. ಅದನ್ನು ಅನುಷ್ಠಾನ ತರಲು ಅಧಿಕಾರಿಗಳು ಮೀನಮೇಷ ಮಾಡುತ್ತಿದ್ದಾರೆ. ಕೂಡಲೇ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ದಾರಿ ಮಾಡಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾ. ೫ರಂದು ನಗರದಲ್ಲಿ ಬೃಹತ್ ಟ್ರಾಕ್ಟರ್ ರ‍್ಯಾಲಿ ನಡೆಸಲಾಗುವುದು ಎಂದು ರೈತ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದಿಳ್ಳೆಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಮಂಜುನಾಥ ಕದಂ, ಸುರೇಶ್ ಚಲವಾದಿ, ಎಂ.ಎಚ್. ಮುಲ್ಲಾ, ಚನ್ನಪ್ಪ ಲಮಾಣಿ, ಹೇಮಣ್ಣ ಕರೆಮ್ಮನವರ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ