ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಐದು ದೀಪದ ವೃತ್ತದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಪಟ್ಟಣದ ನಿವಾಸಿಗಳು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿ ಬಳಿಕ ಪಟ್ಟಣದ ಪುರಸಭೆವರೆಗೂ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಿ ಮುಖ್ಯಾಧಿಕಾರಿ ಹಾಗೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪುರಸಭೆಯಲ್ಲಿ ಕಂಡುಕೇಳರಿಯದಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಇಲ್ಲಿನ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಜನರಿಂದ ಸುಲಿಗೆ ಮಾಡಿ ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.ಜಿಲ್ಲಾಧಿಕಾರಿಗಳ ಆದೇಶವನ್ನೇ ತಿರುಚುತ್ತಿರುವ ಮುಖ್ಯಾಧಿಕಾರಿ ಕೆಳಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಬ್ಲಾಕ್ ಮೇಲೆ ಮಾಡುತ್ತಿದ್ದಾನೆ. ಈತ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದು, ಈತನ ಮೇಲೆ ಲೋಕಾಯುಕ್ತ ರೇಡ್ ಕೇಸ್ ಸೇರಿದಂತೆ ಹಲವು ಆರೋಪಗಳಿವೆ. ಜಿಲ್ಲಾಧಿಕಾರಿಗಳು ದಾಖಲೆ ಪರಿಶೀಲಿಸಿ ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
2006ರ ನನ್ನ ಶಾಸಕರ ಅವಧಿಯಲ್ಲಿ ಪಟ್ಟಣದ 550ಕ್ಕೂ ಅಧಿಕ ನಿವೇಶನ ಹಂಚಿಕೆ ಮಾಡಿದ್ದೇನೆ. ಅರ್ಜಿದಾರದ ಅರ್ಜಿ ಶುಲ್ಕವನ್ನು ಸಹ ನನ್ನ ಶಾಸಕರ ಸಂಬಳದಿಂದಲೇ ಭರಿಸಿಕೊಟ್ಟಿದ್ದೇನೆ. ಇದೀಗ ಹಂಚಿಕೆ ಮಾಡಲು ಮುಂದಾಗಿರುವ 175 ನಿವೇಶನಗಳನ್ನು ಸಹ ನಾವೇ ಗುರುತಿಸಿ ಇಟ್ಟಿದ್ದೇವು. 175 ಸೈಟು ಹಂಚಿಕೆ ಬದಲು ಮತ್ತಷ್ಟು ಬಡ ಜನರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಚಂದ್ರೆ ಬಡಾವಣೆ ಬಳಿ ಸುಮಾರು 25 ಎಕರೆ ಸರಕಾರಿ ಜಮೀನನ್ನು ಗುರುತಿಸಿ ನಿವೇಶನ ಮಾರ್ಪಾಡು ಮಾಡಲು ಮುಂದಾಗಿದ್ದೆ. ಬದಲಾದ ರಾಜಕೀಯದಿಂದ ಅದು ಸಾಧ್ಯವಾಗಲಿಲ್ಲ ಎಂದರು.
ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರ ಹಿಡಿತ ಇಲ್ಲದ ಕಾರಣ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಅವರು ಒಂದು ತಿಂಗಳು ಅಮೇರಿಕದಲ್ಲಿ ಒಂದು ತಿಂಗಳು ಕ್ಷೇತ್ರದಲ್ಲಿ ಇದ್ದರೆ ಕ್ಷೇತ್ರವನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಟೀಕಿಸಿದರು.
ಪುರಸಭೆ ಮುಖ್ಯಾಧಿಕಾರಿಗೆ ರಜೆ ನೀಡಿ ಆತನ ವಿರುದ್ದ ಆರೋಪಗಳನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕಚೇರಿಗಳ ಅಧಿಕಾರಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ವಾಪಸ್ ಪಡೆದರು.