ಭೂ ಪರಿಹಾರ ನೀಡಲು ವಿಳಂಬ ಖಂಡನೆ: ಲೈನ್ ದುರಸ್ತಿ ಕಾಮಗಾರಿಗೆ ಅಡ್ಡಿಪಡಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Nov 21, 2024, 01:01 AM IST
20ಕೆಎಂಎನ್ ಡಿ23,24 | Kannada Prabha

ಸಾರಾಂಶ

ರಾಮನಗರ ಜಿಲ್ಲೆ ಕೊತ್ತಿಪುರದಿಂದ ಮಂಡ್ಯದ ತೂಬಿನಕೆರೆ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಮಾಡಲು ನಿರ್ಮಾಣ ಮಾಡಿರುವ ಟವರ್ ಮತ್ತು ಲೈನ್ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ವಿದ್ಯುತ್ ಪ್ರಸರಣ ನಿಗಮದ ಕ್ರಮ ವಿರೋಧಿಸಿ ತಾಲೂಕಿನ ಕುದುರೆಗುಂಡಿ ಗ್ರಾಮದ ರೈತರು ಬುಧವಾರ ಲೈನ್ ದುರಸ್ತಿ ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಮನಗರ ಜಿಲ್ಲೆ ಕೊತ್ತಿಪುರದಿಂದ ಮಂಡ್ಯದ ತೂಬಿನಕೆರೆ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಮಾಡಲು ನಿರ್ಮಾಣ ಮಾಡಿರುವ ಟವರ್ ಮತ್ತು ಲೈನ್ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ವಿದ್ಯುತ್ ಪ್ರಸರಣ ನಿಗಮದ ಕ್ರಮ ವಿರೋಧಿಸಿ ತಾಲೂಕಿನ ಕುದುರೆಗುಂಡಿ ಗ್ರಾಮದ ರೈತರು ಬುಧವಾರ ಲೈನ್ ದುರಸ್ತಿ ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.

ಕಾಮಗಾರಿಗೆ ಅಡ್ಡಿಪಡಿಸಿದ ರೈತರ ಮನವೊಲಿಸಲು ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್, ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ರೈತರು ಗುಂಪು ಭೂ ಪರಿಹಾರ ನೀಡುವವರೆಗೆ ಲೈನ್ ದುರಸ್ತಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು.

ನಂತರ ತಹಸಿಲ್ದಾರ್ ಡಾ.ಶ್ವೇತಾ ರಾಮು, ಎರಡು ದಿನದಲ್ಲಿ ಸರ್ವೆ ಕಾರ್ಯ ನಡೆಸಿ ಪರಿಹಾರ ಬಿಡುಗಡೆಗೆ ಕ್ರಮ ದುರಸ್ತಿಗೆ ಅವಕಾಶ ನೀಡುವಂತೆ ಪ್ರತಿಭಟನಾನಿರತ ರೈತರ ಮನವೊಲಿಸುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಡಾ.ಶ್ವೇತ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿದರು.

ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೊತ್ತಿಪುರ ಗ್ರಾಮದಿಂದ ಮಂಡ್ಯ ತೂಬಿನಕೆರೆ ಕೈಗಾರಿಕಾ ಪ್ರದೇಶದ 220 ಕೆ. ವಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪೂರೈಕೆ ಮಾಡಿ ಮಂಡ್ಯ ನಗರ, ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ, ಕುಡಿಯುವ ನೀರು ಹಾಗೂ ರೈಲು ನಿಲ್ದಾಣಗಳಿಗೆ ವಿದ್ಯುತ್ ಪೂರೈಕೆ ಮಾಡಲು ರೈತರ ಭೂಮಿ ವಶಪಡಿಸಿಕೊಳ್ಳಲಾಗಿತ್ತು.

ಮದ್ದೂರು ತಾಲೂಕಿನ ತೈಲೂರು, ಬೂದಗುಪ್ಪೆ, ವೈದ್ಯನಾಥಪುರ, ಚನ್ನಸಂದ್ರ, ಗೊರವನಹಳ್ಳಿ, ಕುದರಗುಂಡಿ ಸೇರಿದಂತೆ ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ವಿದ್ಯುತ್ ಟವರ್ ಹಾಗೂ ಲೈನ್ ನಿರ್ಮಾಣ ಮಾಡಲು 2018 ರಲ್ಲಿ ರೈತರ ಕೃಷಿ ಭೂಮಿ ವಶಪಡಿಸಿಕೊಂಡಿದ್ದು, ಈ ವೇಳೆ ಪ್ರತಿ ಎಕರೆಗೆ 2 ಲಕ್ಷ ರು ಪರಿಹಾರ ವನ್ನು ಜಿಲ್ಲಾಧಿಕಾರಿಗಳು ನಿಗದಿ ಮಾಡಿ ಆದೇಶ ಹೊರಡಿಸಿದ್ದರು.

ಅದರಂತೆ ಗೊರವನಹಳ್ಳಿ ಹಾಗೂ ಕುದುರೆಗುಂಡಿ ಗ್ರಾಮಗಳ ಹೊರತುಪಡಿಸಿ ಉಳಿದ ರೈತರುಗಳಿಗೆ ಪರಿಹಾರ ನೀಡ ನೀಡಲಾಗಿತ್ತು. ಆದರೆ ಗೊರವನಹಳ್ಳಿ ಮತ್ತು ಕುದುರೆಗುಂಡಿ ಗ್ರಾಮಗಳ ಜಮೀನುಗಳ ಸರ್ವೆ ಕಾರ್ಯವಿಳಂಬವಾದ ಕಾರಣ ಪರಿಹಾರ ನೀಡಿರಲಿಲ್ಲ.

ಈ ಬಗ್ಗೆ ರೈತರು ವಿದ್ಯುತ್ ಪ್ರಸರಣ ನಿಗಮ, ಜಿಲ್ಲಾ ಮತ್ತು ತಾಲೂಕ್ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರು ಸಹ ಪರಿಹಾರದ ಹಣ ಬಿಡುಗಡೆಯಾಗಿರಲಿಲ್ಲ. ಕಳೆದ ನಾಲ್ಕು ದಿನಗಳ ಹಿಂದೆ ಕುದುರೆಗುಂಡಿ ಗ್ರಾಮದ ಜಮೀನಿನಲ್ಲಿ ನಿರ್ಮಾಣ ಮಾಡಲಾಗಿದ್ದ ಟವರ್ ನಿಂದ ಟವರ್ ಗೆ ಎಳೆಯಲಾಗಿದ್ದ ವಿದ್ಯುತ್ ಐ ಟೆನ್ಶನ್ ತಂತಿ ತುಂಡಾಗಿ ವಿದ್ಯುತ್ ಸಂಪರ್ಕದಲ್ಲಿ ಅಡಚಣೆ ಉಂಟಾಗಿತ್ತು.

ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ ನಾಲ್ಕು ದಿನಗಳ ಹಿಂದೆ ಲೈನ್ ದುರಸ್ತಿಗೆ ಆಗಮಿಸಿದಾಗ ರೈತರು ತಡೆದು ಭೂ ಪರಿಹಾರದ ಹಣ ಬಿಡುಗಡೆ ಮಾಡುವವರೆಗೆ ದುರಸ್ತಿ ಮಾಡದಂತೆ ತಾಕಿತುಮಾಡಿ ಕಾಮಗಾರಿಗೆ ಅಡ್ಡಿಪಡಿಸಿದರು.

ನಂತರ ಅಧಿಕಾರಿಗಳ ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಠಾಣೆಯ ಸಿಪಿಐಗಳಾದ ವೆಂಕಟೇಗೌಡ ಹಾಗೂ ಶಿವಕುಮಾರ್ ಅವರುಗಳು ಲೈನ್ ದುರಸ್ತಿ ಕಾರ್ಯಕ್ಕೆ ಅಡ್ಡಿಪಡಿಸಿದಂತೆ ರೈತರ ಮನವೊಲಿಸುವ ಪ್ರಯತ್ನ ವಿಫಲವಾಯಿತು. ನಂತರ ಬುಧವಾರ ಬೆಳಗ್ಗೆ ಮತ್ತೆ ಲೈನ್ ದುರಸ್ತಿಗೆ ಆಗಮಿಸಿದ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಭೂ ಮಾಲೀಕರು 2018ರಲ್ಲಿ ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ಪ್ರತೀ ಎಕರೆಗೆ 2 ಲಕ್ಷ ರು. ಪರಿಹಾರ ಸಾಲದು ಈಗಿನ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಟವರ್ ನಿರ್ಮಾಣದ ಜಾಗದಲ್ಲಿ ಬೆಳೆ ನಷ್ಟಕ್ಕೂ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಲೈನ್ ದುರಸ್ತಿ ಕಾಮಗಾರಿ ಕೈಗೊಳ್ಳಬಾರದು. ಒಂದು ವೇಳೆ ಅಧಿಕಾರಿಗಳು ಪೊಲೀಸರ ಬಲಪ್ರಯೋಗ ಮಾಡಿ ದುರಸ್ತಿ ಮುಂದಾದರೆ ಮುಂದಿನ ಅನಾಹುತಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿ ಗಳು ಹೊಣೆಯಾಗಬೇಕಾಗುತ್ತದೆ ಎಂದು ಪ್ರತಿಭಟನಾ ನಿರತ ರೈತರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕುದರಗುಂಡಿ ಗ್ರಾಮದ ಕೆ.ಎಲ್.ಪ್ರಭು, ಕೆಎಂ ಸಿದ್ದಪ್ಪ, ಕೆ.ಪಿ.ರಾಮೇಗೌಡ, ಕೆ.ಎಸ್.ನಾರಾಯಣ, ಕೆ.ಬಿ. ಗಿರೀಶ, ಜಗದೀಶ, ಶ್ರೀಧರ, ಕೆ.ಪಿ.ವಿಶಾಲಮ್ಮ, ಕೆ.ಟಿ. ಚಂದ್ರಶೇಖರ್ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''