ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಸೌದೆ ಒಲೆ ಒಡ್ಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯೋಗೇಂದ್ರ ಮಾತನಾಡಿ, ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಆರಂಭಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರ ಜನಾಕ್ರೋಶ ಯಾತ್ರೆಯ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಿದೆ. ಈಗ ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದರು. ಗ್ಯಾಸ್ ಸಿಲಿಂಡರ್ ಬೆಲೆ 50 ರು.ಏರಿಕೆ ಮಾಡಿದ್ದು, ಡೀಸೆಲ್, ಪೆಟ್ರೋಲ್ ಅಬಕಾರಿ ಸುಂಕವನ್ನು 2ರು. ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಜೀವನವನ್ನು ದುಸ್ತರಗೊಳಿಸಿದೆ ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಆಗುತ್ತಿದ್ದರೂ ಗ್ಯಾಸ್, ತೈಲೋತ್ಪನ್ನಗಳ ಮೇಲೆ ಸುಂಕ ಏರಿಸಿರುವುದು ಮೋದಿಗೆ ಅಚ್ಚಾ ದಿನಕ್ಕೆ ಸಾಕ್ಷಿಯಾಗಿದೆ ಎಂದರು.
ಈ ಕೇಂದ್ರ ಸರ್ಕಾರ ರೈತ ವಿರೋಧಿ ಜನವಿರೋಧಿ ಸರ್ಕಾರ, ನಿರುದ್ಯೋಗ ಸಮಸ್ಯೆ ಇದೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಈರುಳ್ಳಿ ಬೆಲೆ ಬಗ್ಗೆ ಕೇಳಿದರೆ ನಾನು ಈರುಳ್ಳಿಯನ್ನೇ ಉಪಯೋಗಿಸುವುದಿಲ್ಲ ಎಂದು ಉಡಾಫೆ ಉತ್ತರ ಹೇಳುತ್ತಾರೆ ಎಂದರು. ಯುವ ಕಾಂಗ್ರೆಸ್ ವತಿಯಿಂದ ದೇಶಾದ್ಯಂತ ಈ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬ್ಲಾಕ್ ಮಟ್ಟದಲ್ಲೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸೈಯದ್ ಮುಸಾಯಿಬ್, ಗೀತಾ ಸಿದ್ದರಾಜು, ಚಂದನ್, ಪ್ರಧಾನ ಕಾರ್ಯದರ್ಶಿ ನಂಜುಂಡಶೆಟ್ಟಿ, ವಿಶ್ವ, ಮುಖಂಡ ನಾಗೇಂದರ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಕ್ಷಯ್ ಕುಮಾರ್, ಉಸ್ಮಾನ್, ಸಚಿನ್, ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಮೋಹನ್ ನಗು, ಶಶಾಂಕ್, ಮುತ್ತು, ರಾಜ್ಯ ಕಾರ್ಯದರ್ಶಿ ಸ್ವಾಮಿ, ಗೌಡಹಳ್ಳಿ ರಾಜೇಶ್, ಆನಂತ್, ಸೈಯದ್ ತೋಸಿಫ್, ಲೋಹಿತ್, ವಿಜಯ್, ಅಜಯ್, ವಿಶ್ವ, ವಿಶ್ವಾಸ್, ಮಾದೇಶ್, ನವೀನ್ ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.