ಕನ್ನಡಪ್ರಭ ವಾರ್ತೆ ರಾಯಚೂರು
ಸರ್ಕಾರ ಜಿಲ್ಲೆಯ ಐಎಎಸ್, ಕೆಎಎಸ್ ಅಧಿಕಾರಿಗಳಿಂದ ಹಿಡಿದು ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನು ಮನಬಂದಂತೆ ವರ್ಗಾವಣೆ ಮಾಡುತ್ತಿದ್ದುರುವುದು ಖಂಡನೀಯ ವಿಷಯವಾಗಿದ್ದು, ಈ ಕೂಡಲೇ ದಂಧೆಗೆ ಕಡಿವಾಣ ಹಾಕಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಬುಧವಾರ ಸೇರಿದ ಸಂಘಟನೆ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಯಾವುದೇ ಅಧಿಕಾರಿಗಳು ಒಂದು ಜಿಲ್ಲೆಗೆ ನೇಮಕವಾದಾಗ ಅಲ್ಲಿನ ಪರಿಸ್ಥಿತಿ, ಸಮಸ್ಯೆ ಬಗ್ಗೆ ಅರಿತುಕೊಳ್ಳಲು ಕನಿಷ್ಠ ಕಾಲಾವಕಾಶ ಬೇಕು. ಆದರೆ, ಜನಪ್ರತಿನಿಧಿಗಳು ತಮ್ಮ ನೇರಕ್ಕೆ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಪದೇಪದೆ ವರ್ಗಾವಣೆ ಮಾಡುವುದರಿಂದ ಜಿಲ್ಲೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಈ ವರ್ಗಾವಣೆ ದಂಧೆ ಖಂಡನೀಯ. ಜಿಲ್ಲೆಯಲ್ಲಿ ನಿಯೋಜನೆಗೊಳ್ಳುವ ಯಾವುದೇ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಕನಿಷ್ಠ ಮೂರು ವರ್ಷವಾದರೂ ಇಲ್ಲಿ ಕೆಲಸ ಮಾಡಬೇಕು. ಸರ್ಕಾರಿ ಶಾಲೆ ಶಿಕ್ಷಕರನ್ನು ಜಿಲ್ಲೆಯಿಂದ ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿರುವ ಕಾರಣಕ್ಕೆ ಇಂದು ಶಿಕ್ಷಕರ ಕೊರತೆ ಕಂಡು ಬರುತ್ತಿದೆ. ಇದರಿಂದ ಶೈಕ್ಷಣಿಕ ಹಿನ್ನಡೆಯಾಗುತ್ತಿದೆ. ಮುಖ್ಯವಾಗಿ ಬಡ ಮಧ್ಯಮ ವರ್ಗದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಇದು ಕೇವಲ ಒಂದು ಇಲಾಖೆಗೆ ಸೀಮಿತವಾದ ಸಮಸ್ಯೆಯಲ್ಲ. ಎಲ್ಲ ಇಲಾಖೆಗಳಲ್ಲೂ ಪದೇಪದೆ ಅಧಿಕಾರಿಗಳು ವರ್ಗಾವಣೆಯಾಗುತ್ತಿದ್ದು, ಕೆಲಸ ಕಾರ್ಯಗಳು ನಿಲ್ಲುವಂತಾಗಿದೆ. ಇನ್ನಾದರೂ ಅಧಿಕಾರಿಗಳನ್ನು ಅನಗತ್ಯವಾಗಿ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ನಿಲ್ಲಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಇಚ್ಛಾಶಕ್ತಿ ತೋರಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಗುರುರಾಜ, ಬಸವರಾಜ, ಶಾಂಭವಿ, ಈರಮ್ಮ, ಆಂಜನೇಯ, ರಾಘವೇಂದ್ರ, ಮಾರೆಪ್ಪ ಸೇರಿದಂತೆ ಕಾರ್ಮಿಕರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರು ಇದ್ದರು.