ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ರೈತರು ಟ್ರ್ಯಾಕ್ಟರ್ ಹಾಗೂ ಪಾದಯಾತ್ರೆ ಮುಖಾಂತರ ಬವಸೇಶ್ವರ ವೃತ್ತದವರೆಗೂ ರ್‍ಯಾಲಿ ನಡೆಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ಉಭಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಮುಖಂಡರು, ಜಿಲ್ಲೆಯ ರೈತರು ಮಳೆ ಕೊರತೆ, ಬೆಳೆ ನಷ್ಟ, ಕೃಷಿ ಸಾಲದ ಹೊರೆ, ನೀರಿನ ಅಭಾವ, ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಕೊರತೆ ಹಾಗೂ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಕಾರ್ಮಿಕರು ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಜಾನುವಾರುಗಳಿಗೆ ಮೇವು-ನೀರಿನ ಕೊರತೆ ಎದುರಾಗಿದ್ದು, ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ ರು. ಪರಿಹಾರ, ಕೃಷಿ ಸಾಲಮನ್ನಾ, ತುಂಗಭದ್ರಾ ಎಡದಂಡೆ ಮತ್ತು ನಾರಾಯಣಪುರ ಬಲದಂಡೆ ಕಾಲುವೆಗಳ ಮೂಲಕ ಸಮರ್ಪಕ ನೀರು ಪೂರೈಕೆ, ಪಂಪ್ ಸೆಟ್‌ಗಳಿಗೆ ದಿನಕ್ಕೆ 12 ಗಂಟೆ ವಿದ್ಯುತ್, ಭತ್ತ, ಹತ್ತಿ, ಜೋಳ, ತೊಗರಿ, ಮೆಣಸಿನಕಾಯಿ ಸೇರಿ ಎಲ್ಲ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆ, ಖರೀದಿ ಕೇಂದ್ರಗಳ ಬಾಕಿ ಹಣ ಬಿಡುಗಡೆ, ರಸಗೊಬ್ಬರ-ಬೀಜಗಳ ಸಕಾಲಿಕ ಪೂರೈಕೆ, ಬೆಳೆ ವಿಮೆ ಪರಿಹಾರ ತಕ್ಷಣ ಪಾವತಿ, ಕಾಲುವೆಗಳ ದುರಸ್ತಿ, ಬರ ಪೀಡಿತ ಪ್ರದೇಶಗಳಲ್ಲಿ ಗೋಶಾಲೆ ಆರಂಭ, ಕೃಷಿ ಕಾರ್ಮಿಕರಿಗೆ ಉಚಿತ ಪಡಿತರ, ಉದ್ಯೋಗ ಖಾತ್ರಿ ಯೋಜನೆಯಡಿ ಬರ ಕಾಮಗಾರಿ ಆರಂಭ, ಜಾನುವಾರುಗಳಿಗೆ ಮೇವು-ನೀರು-ಪಶುವೈದ್ಯಕೀಯ ಸೇವೆ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ರಾಜಚಂದ್ರ ರಾಮನಗೌಡ, ಗ್ರಾಮೀಣ ಅಧ್ಯಕ್ಷ ಸಂತೋಷ್ ಗೌಡ ಗುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭು ಮಡಿವಾಳ, ಯುವ ಘಟಕದ ಜಿಲ್ಲಾಧ್ಯಕ್ಷ ಹರೀಶ್ ಮಡಿವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ, ಆಟೋ ಅಸೋಸಿಯೇಷನ್ ಯುವ ಘಟಕದ ಅಧ್ಯಕ್ಷ ಬಾಬು ಗಣೇಶ್ ಹಾಗೂ ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಾಜಿದ್ ಹುಸೇನ್ ಸೇರಿ ಸಂಘಟನೆಯ ಸದಸ್ಯರು, ಪದಾಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.