ಭಯೋತ್ಪಾದಕರ ದಾಳಿ ಖಂಡನೆ: ಶಿರಹಟ್ಟಿಯಲ್ಲಿ ಮೌನಾಚರಣೆ

KannadaprabhaNewsNetwork | Published : Apr 25, 2025 11:48 PM

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಖಂಡಿಸಲಾಗುವುದು ಎಂದು ಶಿರಹಟ್ಟಿ ಬಿಜೆಪಿ ಮಂಡಲದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.

ಶಿರಹಟ್ಟಿ: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಖಂಡಿಸಲಾಗುವುದು ಎಂದು ಶಿರಹಟ್ಟಿ ಬಿಜೆಪಿ ಮಂಡಲದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.ಗುರುವಾರ ರಾತ್ರಿ ಬಸವೇಶ್ವರ ವೃತ್ತ, ಕನಕದಾಸ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಕರ್ನಾಟಕದ ೩ಜನ ಸೇರಿ ಒಟ್ಟು ೨೮ ಜನ ಬಲಿಯಾದ ಹಿಂದೂಗಳಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೇಣದ ದೀಪವನ್ನು ಬೆಳಗುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಕಾಶ್ಮೀರದ ಪಹಲ್ಗಾಂನಲ್ಲಿ ಸೈನಿಕರ ವೇಷದಲ್ಲಿ ಬಂದ ಭಯೋತ್ಪಾದಕರು ಮೋಸದಿಂದ ಅಮಾಯಕ ಹಿಂದೂಗಳ ಭೀಕರ ಮಾರಣ ಹೋಮ ಮಾಡಿರುವುದು ಹೇಯಕೃತ್ಯವಾಗಿದೆ. ಅಮಾನವೀಯ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತಾ ಆಯಾ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ. ಎಲ್ಲ ಭಾರತೀಯರು ಆ ಕುಟುಂಬಗಳ ಜೊತೆಗೆ ಇದ್ದೇವೆ ಎಂದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಶೇ. ೭೫ ಪ್ರತಿಷತ ಈ ಘಟನೆಗಳು ಕಡಿಮೆಯಾಗಿದ್ದವು. ನೀಚ ರಾಕ್ಷಸರಿಗೆ ಕ್ಷಮೆಯೇ ಇಲ್ಲ. ಈ ಮೂಲಭೂತವಾಗಿ ಉಗ್ರರನ್ನು ಬುಡಸಮೇತವಾಗಿ ಕಿತ್ತುಹಾಕಿ ನಾಶಮಾಡಬೇಕು ಎಂದು ಒತ್ತಾಯಿಸಿದರು.

ಈ ಹೀನಕೃತ್ಯವನ್ನು ಜಗತ್ತಿನ ನಾಯಕರೆಲ್ಲರೂ ಖಂಡಿಸಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ಅಮಾಯಕರು ಮಾಡಿದ ತಪ್ಪಾದರೂ ಏನು? ಎಂದು ಪ್ರಶ್ನಿಸಿದ ಅವರು ಈ ದುರಂತಮಯ ಸುದ್ದಿ ತಿಳಿದು ಆಘಾತವೆನಿಸುತ್ತಿದೆ. ದೇಶದ ಒಳಿತಿಗಾಗಿ ಮುಂದಿನ ಪೀಳಿಗೆಗಾಗಿ ನಾವೆಲ್ಲರೂ ಒಂದಾಗಬೇಕಿದೆ ಎಂದು ಕರೆ ನೀಡಿದರು.

ಮುಖಂಡ ಸಂತೋಷ ಕುರಿ ಮಾತನಾಡಿ, ಮಂಗಳವಾರ ಕಾಶ್ಮೀರದ ಪಹಲ್ಗಾಂ ಎಂಬಲ್ಲಿ ಅಮಾಯಕ ಪ್ರವಾಸಿ ನಾಗರಿಕರ ಮೇಲೆ ನಡೆದ ದಾಳಿಯಿಂದ ಬಹುದೊಡ್ಡ ನರಮೇಧ ನಡೆದಿದೆ. ಇದು ಅತ್ಯಂತ ಖಂಡನಾರ್ಹವಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆಯಾಗಿದೆ. ಈ ಘಟನೆಗೆ ಸಾಕ್ಷಿಯಾದ ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಸೇಡು ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಜಮ್ಮು ಕಾಶ್ಮೀರ ಕಣಿವೆಯಲ್ಲಿ ನಾಗರಿಕರ ಮೇಲೆ ಆದ ಅತ್ಯಂತ ದೊಡ್ಡ ದಾಳಿ ಇದಾಗಿದೆ. ಪುಲ್ವಾಮಾ ದಾಳಿಯ ನಂತರ ಪಾಠ ಕಲಿಯಬೇಕಿದ್ದ ಕೇಂದ್ರ ಸರ್ಕಾರ ನಾಗರಿಕರಿಗೆ ರಕ್ಷಣೆ ನೀಡುವಲ್ಲಿ ವಿಫಲಗೊಂಡಂತೆ ಕಾಣುತ್ತಿದೆ. ನುಸುಳುಕೋರರನ್ನು ಸದೆ ಬಡೆಯಲು ಕೇಂದ್ರ ಸರ್ಕಾರದ ಕೈಯಲ್ಲಿ ದೇಶದ ಗಡಿಗಳಿವೆ, ಗಡಿ ರಕ್ಷಣಾ ಪಡೆ ಇದೆ, ಪ್ಯಾರಾಮಿಲ್ಟ್ರಿ, ಭಾರತೀಯ ಸೇನೆ, ಪೊಲೀಸ್ ಸೇರಿ ಗುಪ್ತಚರ ಇಲಾಖೆ ಎಲ್ಲವೂ ಕೇಂದ್ರದ ಕಪಿಮುಷ್ಠಿಯಲ್ಲಿದ್ದರೂ ಈ ಅವಗಡ ಹೇಗಾಯಿತು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು. ಭಯೋತ್ಪಾದನೆ ವಿರುದ್ಧ ಬಲವಾದ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ನಾವೆಲ್ಲರೂ ಹಿಂದುಗಳು. ಆ ಜಾತಿ ಈ ಜಾತಿ ಅಲ್ಲ. ೨೮ ಜನರ ಹತ್ಯೆಗೆ ಕಾರಣರಾದವರು ಬೆಲೆ ತೆರಲೇಬೇಕು. ಈ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಯಾರ ಕುಮ್ಮಕ್ಕಿನಿಂದ ಈ ದುಷ್ಕೃತ್ಯ ನಡೆದಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಪಡೆದು ಅವರನ್ನು ಸದೆ ಬಡೆಯಲು ದಿಟ್ಟ ಹೆಜ್ಜೆ ಇಡಬೇಕು ಎಂದು ಒತ್ತಯಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕೀರೇಶ ರಟ್ಟಿಹಳ್ಳಿ, ಪರಶುರಾಮ ಡೊಂಕಬಳ್ಳಿ, ಶಿವು ಚಕ್ರಸಾಲಿ, ಯಲ್ಲಪ್ಪ ಇಂಗಳಗಿ, ಮಲ್ಲು ಕಬಾಡಿ, ಬಸವರಜ ವಡವಿ, ರಾಮಣ್ಣ ಕಂಬಳಿ, ನಾಗರಾಜ ಇಂಗಳಗಿ, ಈರಣ್ಣ ಕೋಟಿ, ರವಿ ಹಳ್ಳಿ, ಮಹೇಶ ಪಟ್ಟಣಶೆಟ್ಟಿ ಸೇರಿ ಅನೇಕರು ಇದ್ದರು.

Share this article