ದೊಡ್ಡಾಟ, ಸಾಮಾಜಿಕ ರಂಗಭೂಮಿ ಹಾಗೂ ಪೌರಾಣಿಕ ಬಯಲಾಟ ಕ್ಷೇತ್ರಗಳಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಖ್ಯಾತ ಕವಿ–ಕಲಾವಿದ ಎಂ.ಎಸ್. ಮಾಳವಾಡ ನಿಧನಕ್ಕೆ ಪಟ್ಟಣದ ಸಾಹಿತಿಗಳ ಬಳಗ ತೀವ್ರ ಸಂತಾಪ ಸೂಚಿಸಿದೆ.
ಬ್ಯಾಡಗಿ: ದೊಡ್ಡಾಟ, ಸಾಮಾಜಿಕ ರಂಗಭೂಮಿ ಹಾಗೂ ಪೌರಾಣಿಕ ಬಯಲಾಟ ಕ್ಷೇತ್ರಗಳಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಖ್ಯಾತ ಕವಿ–ಕಲಾವಿದ ಎಂ.ಎಸ್. ಮಾಳವಾಡ ನಿಧನಕ್ಕೆ ಪಟ್ಟಣದ ಸಾಹಿತಿಗಳ ಬಳಗ ತೀವ್ರ ಸಂತಾಪ ಸೂಚಿಸಿದೆ.
ಈ ವೇಳೆ ಮಾತನಾಡಿದ ಹಿರಿಯ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ, ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದವರಾದ ಮಾಳವಾಡ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಎಂ.ಎಸ್.ಮಾಳವಾಡ ಇವರು ಇನ್ನಿಲ್ಲ ಎಂಬುದು ಬಲುನೋವಿನ ಸಂಗತಿ, ನಾಟಕ ರಚನಾಕಾರರಾಗಿ, ನಟನಾ ಕೌಶಲ್ಯವುಳ್ಳವರಾಗಿ, ಪೌರಾಣಿಕ, ಐತಿಹಾಸಿಕ ಬಯಲಾಟಗಳನ್ನು ವಿಶಿಷ್ಟ ರೀತಿಯಲ್ಲಿ ರಚಿಸಿ, ನಿರ್ದೇಶಿಸಿ, ನಟಿಸಿದ್ದರು. ನಾಡಿಗೆ ಉತ್ತರ ಕರ್ನಾಟಕದ ಶ್ರೇಷ್ಠ ಕೊಡುಗೆಯಾಗಿದ್ದರು, ರಂಗಭೂಮಿ, ಬಯಲಾಟ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆ ಮರೆಯಲಾರದ್ದು. ಕರ್ನಾಟಕದ ಮೂಲೆಯೊಂದರ ಇಂಗಳಗಿ ಹಳ್ಳಿಯಲ್ಲಿ ಕೃಷಿಕನಾಗಿದ್ದುಕೊಂಡೇ ಮಾಡಿದ ಸಾಧನೆಗೆ ಸಾಟಿಯಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ತುಂಬಲಿ ಎಂದರು.
ಜೀವರಾಜ ಛತ್ರದ ಮಾತನಾಡಿ, ದೊಡ್ಡಾಟ ಕ್ಷೇತ್ರದಲ್ಲಿ ‘ಏಳುಕೊಳ್ಳದ ಯಲ್ಲಮ್ಮ’, ‘ಕಪ್ಪು ನೆಲದ ಕೆಂಪು ಕಥೆ’ ಸೇರಿದಂತೆ ಹಲವಾರು ಐತಿಹಾಸಿಕ ಹಾಗೂ ಚಾರಿತ್ರಿಕ ಕಥನ ರಚಿಸಿ, ಅವುಗಳನ್ನು ದೊಡ್ಡಾಟಗಳ ರೂಪದಲ್ಲಿ ಬರೆದು, ಆಡಿಸಿ ಜನ ಮನಕ್ಕೆ ತಲುಪಿಸಿದ ಹೆಗ್ಗಳಿಕೆ ಮಾಳವಾಡ ಅವರದು, ಸಾಮಾಜಿಕ ರಂಗಭೂಮಿ ಹಾಗೂ ಪೌರಾಣಿಕ ಬಯಲಾಟಗಳಿಗೂ ಅವರು ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.
ಜಾನಪದ ಕಲೆ, ದೊಡ್ಡಾಟ ಮತ್ತು ಬಯಲಾಟ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಸೇವೆ ಗುರ್ತಿಸಿ ಕರ್ನಾಟಕ ಸರ್ಕಾರ ನಾಟಕ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ, ಅಲ್ಲದೆ, ನಾಡಿನ ವಿವಿಧ ಮಠಾಧೀಶರು, ಸಂಘ–ಸಂಸ್ಥೆಗಳು ಹಾಗೂ ಹಲವು ಪ್ರತಿಷ್ಠಿತ ಸಂಸ್ಥೆಗಳು ವಿವಿಧ ಪ್ರಶಸ್ತಿ–ಪುರಸ್ಕಾರಗಳನ್ನು ನೀಡಿ ಅವರ ಕಲಾ ಸೇವೆಯನ್ನು ಗೌರವಿಸಿವೆ ಎಂದರು.
ಮಾಲತೇಶ ಚಳಗೇರಿ, ಮಾತನಾಡಿ, ಮಾಳವಾಡ ಅವರ ನಿಧನದಿಂದ ಜಾನಪದ, ದೊಡ್ಡಾಟ, ಬಯಲಾಟ ಹಾಗೂ ಸಾಮಾಜಿಕ ರಂಗಭೂಮಿ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ. ಅವರ ಅಗಲಿಕೆಗೆ ಕಲಾವಿದರು, ಸಾಹಿತ್ಯಾಸಕ್ತರು, ಜಾನಪದ ಕಲಾವಿದರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ ಎಂದರು.
ಈ ಸಂದರ್ಭದಲ್ಲಿ ಶಕುಂತಲಾ ದಾಳೇರ, ಜಮೀರ್ ರಿತ್ತಿ, ವೈ.ಬಿ.ಹೊಸಳ್ಳಿ, ವೈ ಟಿ ಹೆಬ್ಬಳ್ಳಿ, ಶಿವಕುಮಾರ ಮಠದ, ಮಲ್ಲಪ್ಪ ಕರಿಯಣ್ಣನವರ, ರಾಜೇಶ್ವರಿ ಬಿಲಹಳ್ಳಿ, ದುರುಗಪ್ಪ ಕೆಂಗೊಂಡ, ಮಂಗಳಾ ಕಂಬಿ ಹಾಗೂ ಇನ್ನಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.