ಬೆಳೆಹಾನಿ ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶವೆಂದು ಘೋಷಿಸಿ: ನಿಖಿಲ್‌ ಕುಮಾರಸ್ವಾಮಿ

KannadaprabhaNewsNetwork |  
Published : Jul 15, 2026, 03:15 AM IST
ಬರಪೀಡಿತ ಪ್ರದೇಶಗಳಿಗೆ ನಿಖಿಲ ಕುಮಾರಸ್ವಾಮಿ ಭೇಟಿ | Kannada Prabha

ಸಾರಾಂಶ

ಜೆಡಿಎಸ್ ಪಕ್ಷದಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದೊಂದಿಗೆ ಮಂಗಳವಾರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳ ವಿವಿಧ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ರೈತರ ಸಮಸ್ಯೆ ಆಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ತೀವ್ರ ಬರಗಾಲದ ಪರಿಸ್ಥಿತಿಯಿದ್ದು, ಅನ್ನದಾತನ ಜೀವನ ದುಸ್ತರವಾಗಿದೆ. ಸರ್ಕಾರ ಕೂಡಲೇ ಬೆಳೆಹಾನಿ ಸಮೀಕ್ಷೆ ನಡೆಸಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬರ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು. ಸಾಲ ಮನ್ನಾ ಮತ್ತು ಬಡ್ಡಿ ಸಡಿಲಿಕೆ ಮಾಡಬೇಕು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಒತ್ತಾಯಿಸಿದರು.

ಜೆಡಿಎಸ್ ಪಕ್ಷದಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದೊಂದಿಗೆ ಮಂಗಳವಾರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳ ವಿವಿಧ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ರೈತರ ಅಳಲು ಆಲಿಸಿ ಮಾತನಾಡಿದರು.

ಕೆಎಸ್‌ಎನ್‌ಡಿಎಂಸಿ ವರದಿ ಪ್ರಕಾರ ರಾಜ್ಯದ 135 ತಾಲೂಕುಗಳು ಡಿಫಿಸಿಯೆಂಟ್ ವಲಯದಲ್ಲಿವೆ. ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ನಷ್ಟವಾಗಿದೆ. ಸುಮಾರು 70 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ತಕ್ಷಣವೇ ಪ್ರತಿ ಎಕರೆಗೆ ₹25,000 ಪರಿಹಾರ ಜಮಾ ಮಾಡಬೇಕು. ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳ ಎಲ್ಲಾ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ರೈತರ ಮೇಲೆ ಸಾಲದ ವಸೂಲಾತಿಗೆ ಒತ್ತಡ ಹೇರಬಾರದು. ಮೇವಿನ ಅಭಾವದಿಂದ ರೈತರು ದನ-ಕರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಹೋಬಳಿ ಕೇಂದ್ರದಲ್ಲಿ ಉಚಿತ ಮೇವು ಬ್ಯಾಂಕ್ ಮತ್ತು ಸಂಗ್ರಹ ಕೇಂದ್ರ ಆರಂಭಿಸಬೇಕು. ಅಂತರ್ಜಲ ಸಂಪೂರ್ಣ ಬತ್ತಿದ್ದು, ಟ್ಯಾಂಕರ್‌ ನೀರು ಮತ್ತು ತುರ್ತು ಬೋರ್‌ವೆಲ್‌ಗಳಿಗಾಗಿ ಪ್ರತಿ ತಾಲೂಕಿಗೆ ಕನಿಷ್ಠ ₹5 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಸುಮಾರು ಶೇ.40ಕ್ಕಿಂತಲೂ ಕಡಿಮೆ ಮಳೆಯಾಗಿದ್ದು, ಏಕದಳ, ದ್ವಿದಳ ಹಾಗೂ ಇತರೆ ಬೆಳೆಗಳಿಗೆ ತೀವ್ರ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಮಳೆಯಿಲ್ಲದ ಕಾರಣ ರೈತರು ಬಿತ್ತನೆಯನ್ನೇ ಮಾಡಿಲ್ಲ. ಬಿತ್ತನೆ ಮಾಡಿದರೂ ಮಳೆ ಅಭಾವದಿಂದ ಬೆಳೆ ಸರಿಯಾಗಿ ಬಂದಿಲ್ಲ. ಮಳೆ ಕೊರತೆಯಿಂದ ಒಣಗಿ ನಿಂತಿರುವ ಬೆಳೆ ನೋಡಿದರೆ ಕರಳು ಹಿಂಡಿದಂತಾಯಿತು. ಹಗಲಿರುಳು ಶ್ರಮಿಸಿ, ಸಾಲ ಮಾಡಿ ಬೆಳೆದ ಬೆಳೆ ಕಣ್ಣೆದುರೇ ಒಣಗುತ್ತಿದ್ದು,ರೈತರ ನೋವನ್ನು ಹೇಳಲು ಪದಗಳೇ ಸಾಲದು. ರೈತರ ಆತಂಕ, ಅಸಹಾಯಕತೆ ಮತ್ತು ಭವಿಷ್ಯದ ಚಿಂತೆ ನಮ್ಮನ್ನು ಸಾಕಷ್ಟು ಕಾಡುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡನೀಯ. ನಮ್ಮ ತಂಡದ ಅಧ್ಯಯನ ವರದಿಯನ್ನು ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಸಿ.ಟಿ, ಕೋರ್‌ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣರೆಡ್ಡಿ, ನಾಗಠಾಣ ಮಾಜಿ ಶಾಸಕ ದೇವಾನಂದ ಚವ್ಹಾಣ, ಮುಖಂಡರಾದ ಬಿ.ಡಿ. ಪಾಟೀಲ, ಮಾಜಿ ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಮುಖಂಡರು, ರೈತರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಹುಲ್‌ ಗಾಂಧಿ ಬಿಡದಿಗೆ ಬರಲಿ:

ಬಿಡದಿಯಲ್ಲಿ ರೈತರ ಗಲಾಟೆ ವಿಚಾರವಾಗಿ ಮಾತನಾಡಿದ ನಿಖಿಲ ಕುಮಾರಸ್ವಾಮಿ, ರಾಹುಲ್‌ ಗಾಂಧಿ ಅಂಡಮಾನ್ ನಿಕೋಬಾರ್‌ಗೆ ಹೋಗಿ ಪರಿಸರ ನಾಶದ ಕುರಿತು ಮಾತನಾಡುವ ಬದಲು ಬಿಡದಿಗೆ ಬರಲಿ, ಈ ಭಾಗದಲ್ಲಿ ಅಡಕೆ, ತೆಂಗು, ರೇಷ್ಮೆ‌ ಸೇರಿದಂತೆ ಹಲವು ಫಲವತ್ತಾದ ಬೆಳೆಗಳು ಇವೆ. ಸುಮಾರು 95 ಪ್ರತಿಶತ ರೈತರು ಯೋಜನೆಗೆ ವಿರೋಧವಿದೆ. ನಾವೇನೂ ಅಭಿವೃದ್ಧಿ ವಿರೋಧಿ ಅಲ್ಲ, ಆದರೆ ಫಲವತ್ತಾದ ಭೂಮಿಗಳನ್ನು ಯಾಕೆ ತಗೋತಾರೆ?. ರಾಹುಲ್‌ ಗಾಂಧಿ ಬಿಡದಿಗೆ ಬಂದು ನೋಡಲಿ, ಇಲ್ಲಿನ ಬೆಳೆಗಳ ಬಗ್ಗೆ ಗೊತ್ತಾಗುತ್ತದೆ ಎಂದ ಅವರು, ರೈತರು ಹೋರಾಟಕ್ಕೆ ಕುಳಿತಾಗ ಸರ್ವೇಗೆ ಬಂದಿದ್ದಾರೆ. ಸರ್ಕಾರ ಹೇಳಿದಾಗಲೇ ಸರ್ವೇಗೆ ಬಂದಿರಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಚಂದ್ರಗೌಡ ಅಜಾತಶತ್ರು: ಡಿಕೆಶಿ
ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತ ಸಂಘಟನೆಗಳ ವಿನೂತನ ಪ್ರತಿಭಟನೆ