ಜೆಜೆಎಂ ಯೋಜನೆ ಕುರಿತು ಅಧ್ಯಯನ ನಡೆಸಿ

KannadaprabhaNewsNetwork |  
Published : May 07, 2025, 12:49 AM IST
ಪೊಟೊ: 06ಎಸ್ಎಂಜಿಕೆಪಿ08ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ: ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆಜೆಎಂ ಯೋಜನೆಯಡಿ ಜಿಲ್ಲೆಯಲ್ಲಿ ಅಧ್ಯಯನ ಕೈಗೊಂಡು ಯೋಜನೆಯನ್ನು ಎಲ್ಲ ಅರ್ಹರಿಗೆ ತಲುಪಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಶಿವಮೊಗ್ಗ: ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆಜೆಎಂ ಯೋಜನೆಯಡಿ ಜಿಲ್ಲೆಯಲ್ಲಿ ಅಧ್ಯಯನ ಕೈಗೊಂಡು ಯೋಜನೆಯನ್ನು ಎಲ್ಲ ಅರ್ಹರಿಗೆ ತಲುಪಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿ, ಜೆಜೆಎಂ ಅಡಿಯಲ್ಲಿ ಅಂದಾಜು 10.75 ಕೋಟಿ ರು. ಮೊತ್ತದಲ್ಲಿ ಒಟ್ಟು 2528 ಕಾಮಗಾರಿ ಮಂಜೂರಾಗಿದ್ದು, 2507 ಕಾಮಗಾರಿ ಪ್ರಾರಂಭಗೊಂಡಿವೆ. 699 ಪ್ರಗತಿಯಲ್ಲಿದ್ದು, 1808 ಪೂರ್ಣಗೊಂಡಿವೆ. ಯಾವುದೇ ಹೊಸ ಕಾಮಗಾರಿ ಕೈಗೊಳ್ಳುವ ಮುನ್ನ ಅಧಿಕಾರಿಗಳು ಯೋಜನಾ ಪೂರ್ವ ಪರಿಶೀಲನೆ ಕೈಗೊಳ್ಳಬೇಕು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಅಭಿಪ್ರಾಯ ಪಡೆದು ಮುನ್ನಡೆಯಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಲು 1.20 ಲಕ್ಷ ರು. ಘಟಕ ವೆಚ್ಚ ನೀಡಲಾಗುತ್ತಿದ್ದು, ಕೆಲ ಫಲಾನುಭವಿಗಳು ಘಟಕ ವೆಚ್ಚ ಸಾಲುತ್ತಿಲ್ಲವೆಂದು ಈ ಹಣವನ್ನು ಹಿಂದಿರುಗಿಸಿದ್ದಾರೆ. ಕೆಲವೆಡೆ ಹಕ್ಕುಪತ್ರ ಇದ್ದವರಿಗೆ ಮಾತ್ರ ನೀಡಲಾಗುತ್ತಿದೆ. ಅನಧಿಕೃತ ಜಾಗಗಳನ್ನು ಸಕ್ರಮಗೊಳಿಸುವ ಹಾಗೂ ಅರ್ಹರಿಗೆ ಈ ಯೋಜನೆಯನ್ನು ತಲುಪಿಸಬೇಕೆಂದು ಸೂಚಿಸಿದರು. ದಿಶಾ ಸಮಿತಿ ಸದಸ್ಯರಾದ ಗುರುಮೂರ್ತಿ ಮಾತನಾಡಿ, ಜಿಲ್ಲೆಯ ಮೊರಾರ್ಜಿ ಶಾಲೆಗಳ ರಿಪೇರಿಗೆ 2024ರಲ್ಲೇ ರೂ.3.96 ಕೋಟಿ ರು. ಹಣ ಶಿವಮೊಗ್ಗ ಜಿಲ್ಲೆಯ ಲ್ಯಾಂಡ್ ಆರ್ಮಿಗೆ ಮಂಜೂರಾಗಿದ್ದು, ಈವೆರೆಗೆ ಜಿಲ್ಲೆಗೆ ಹಣ ಬಿಡುಗಡೆಯಾಗಿಲ್ಲ. ಕೇಂದ್ರ ಕಚೇರಿಯಲ್ಲೇ ಇಟ್ಟುಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಪ್ರಗತಿ ಕಡಿಮೆ ಇದ್ದಂತಿದೆ. ಶಿವಮೊಗ್ಗ ನಗರದಲ್ಲೇ 12 ಸಾವಿರ ಹೆರಿಗೆ ಆಗುತ್ತದೆ. ಆದರೆ ಜಿಲ್ಲಾ ಯೋಜನೆ ಗುರಿ ಕೇವಲ 8524 ಇದ್ದು 2024ರ ಏಪ್ರಿಲ್‌ನಿಂದ 2025 ರ ಮಾರ್ಚ್‌ವರೆಗೆ 7395 ಫಲಾನುಭವಿ ಶೇ.87 ಪ್ರಗತಿ ಸಾಧಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆ ಹೆಚ್ಚಾಗಿ ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ನೀಡದ ಕಾರಣ ಮಕ್ಕಳನ್ನು ನಗರಕ್ಕೆ ಕಳುಹಿಸಲಾಗುತ್ತಿದೆ. ಎಸ್‌ಸಿ, ಎಸ್‌ಟಿ, ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇಂತಹ ಗ್ರಾಮೀಣ ಭಾಗ ಶಾಲೆಗಳಿಗೆ ಇಂಗ್ಲಿಷ್ ಮಾಧ್ಯಮ ನೀಡಿದರೆ ಬದುಕುತ್ತವೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ 11 ಶಾಲೆಗಳು ಬಂದ್ ಆಗಿವೆ. ಇಂಗ್ಲಿಷ್ ಮಾಧ್ಯಮಗಳ ಆರಂಭಕ್ಕೆ ನೀಡಿದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಮಂಜುನಾಥ್, ಜಿಲ್ಲೆಯಿಂದ ಇಂಗ್ಲಿಷ್‌, ಕನ್ನಡ ಮಾಧ್ಯಮ-ದ್ವಿಭಾಷೆ ಮಾಧ್ಯಮಕ್ಕಾಗಿ 32 ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಪ್ರತಿ ತರಗತಿಗೆ ಕನಿಷ್ಠ 25 ವಿದ್ಯಾರ್ಥಿಗಳಿರಬೇಕೆಂಬ ನಿಯಮವಿದ್ದರೂ, ತಾಲೂಕುಗಳಿಂದ ಬಂದಂತಹ ಎಲ್ಲ 32 ಪ್ರಸ್ತಾವನೆಯನ್ನು ಕಳುಸಹಿಲಾಗಿದೆ. ಜಿಲ್ಲೆಯಲ್ಲಿ 10 ಕೆಪಿಎಸ್ ಶಾಲೆಗಳು ಚಾಲ್ತಿಯಲ್ಲಿದ್ದು 19 ಕೆಪಿಎಸ್ ಶಾಲೆ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ದಿಶಾ ಸಮಿತಿ ಸದಸ್ಯರಾದ ಗಿರೀಶ್ ಭದ್ರಾಪುರ, ಮಲ್ಲಿಕಾರ್ಜುನ ಹಕ್ರೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್‌.ಹೇಮಂತ್‌ ಮತ್ತಿತರರಿದ್ದರು.

ಕಾಮಗಾರಿಗಳನ್ನು ಪೂರ್ಣಗೊಳಿಸಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಗಳನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಬೇಕು. ಹೊಳೆಹೊನ್ನೂರು ಬೈಪಾಸ್ ರಸ್ತೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೆ ಅನುವು ಮಾಡಿಕೊಡಬೇಕು ಹಾಗೂ ಸಿಗಂದೂರು ಸೇತುವೆಯನ್ನು ಜೂನ್ ಅಂತ್ಯದೊಳಗೆ ಮುಗಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಸೂಚನೆ ನೀಡಿದರು.

ಬಹು ಗ್ರಾಮ ನೀರಿನ ಯೋಜನೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕಾಮಗಾರಿಗಳನ್ನು ಕ್ಷಿಪ್ರಗೊಳಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ