ಸುಹಾಸ್‌ ಶೆಟ್ಟಿ ಹತ್ಯೆಗೆ 50 ಲಕ್ಷ ರು. ಫಂಡಿಂಗ್‌: ಹಿಂದು ಸಂಘಟನೆಗಳ ಆರೋಪ

KannadaprabhaNewsNetwork |  
Published : May 07, 2025, 12:49 AM IST
ಹಿಂಜಾವೇ ಪ್ರಾಂತ ಪ್ರಮುಖ್‌ ಕೆ.ಟಿ.ಉಲ್ಲಾಸ್‌ ಪ್ರೆಸ್‌ | Kannada Prabha

ಸಾರಾಂಶ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಶಂಕೆ ಇದೆ. ಫಾಜಿಲ್‌ ಹತ್ಯೆಗೆ ಪ್ರತೀಕಾರವಾಗಿ ಮಾತ್ರ ಸುಹಾಸ್ ಹತ್ಯೆ ನಡೆಸಿಲ್ಲ. ಫಾಜಿಲ್‌ ಸಹೋದರ ಮಾತ್ರ ಕೊಲೆಗೆ ಸುಪಾರಿ ನೀಡಿಲ್ಲ. ಕೆಲವು ದುಷ್ಟಶಕ್ತಿಗಳು ಸುಹಾಸ್ ಕೊಲೆಗೆ ೫೦ ಲಕ್ಷ ರು. ಫಂಡಿಂಗ್‌ ಸಂಗ್ರಹಿಸಿರುವ ಮಾಹಿತಿಯಿದೆ ಎಂದು ಸಂಘ ಪರಿವಾರ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ೫೦ ಲಕ್ಷ ರುಪಾಯಿಗೂ ಅಧಿಕ ಮೊತ್ತ ಫಂಡಿಂಗ್ ಆಗಿದೆ. ನಿಷೇಧಿತ ಸಂಘಟನೆ ಪಾಪ್ಯುಲರ್‌ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ನಡೆಸುತ್ತಿರುವ ‘ಟಾರ್ಗೆಟೆಡ್ ಕಿಲ್ಲಿಂಗ್’ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಈ ಹತ್ಯೆ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸಬೇಕು ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಹಾಗೂ ಹಿಂದು ಜಾಗರಣ ವೇದಿಕೆ ಜಂಟಿಯಾಗಿ ಆಗ್ರಹಿಸಿವೆ.

ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ಕೆ.ಟಿ. ಉಲ್ಲಾಸ್ ಸೋಮವಾರ ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಶಂಕೆ ಇದೆ. ಫಾಜಿಲ್‌ ಹತ್ಯೆಗೆ ಪ್ರತೀಕಾರವಾಗಿ ಮಾತ್ರ ಸುಹಾಸ್ ಹತ್ಯೆ ನಡೆಸಿಲ್ಲ. ಫಾಜಿಲ್‌ ಸಹೋದರ ಮಾತ್ರ ಕೊಲೆಗೆ ಸುಪಾರಿ ನೀಡಿಲ್ಲ. ಕೆಲವು ದುಷ್ಟಶಕ್ತಿಗಳು ಸುಹಾಸ್ ಕೊಲೆಗೆ ೫೦ ಲಕ್ಷ ರು. ಫಂಡಿಂಗ್‌ ಸಂಗ್ರಹಿಸಿರುವ ಮಾಹಿತಿಯಿದೆ. ಕುಡುಪುವಿನಲ್ಲಿ ಅಶ್ರಫ್‌ ಎಂಬಾತನ ಕೊಲೆ ನಡೆದ ಮೂರು ದಿನದಲ್ಲಿ ಪಿಎಫ್‌ಐ ಮಾದರಿಯಲ್ಲಿ ಈ ಕೊಲೆ ನಡೆಸಲಾಗಿದೆ. ಕೊಲೆ ನಡೆಸಿದ ಬಳಿಕ ಆರೋಪಿಗಳು ಸ್ಥಳದಿಂದ ತೆರಳಲು ಯಾವುದೇ ಆತುರ ಇರಲಿಲ್ಲ. ಸುಹಾಸ್ ಸಾವಿನ ಬಗ್ಗೆ ಖಾತರಿಯಾದ ಬಳಿಕ ಆರೋಪಿಗಳು ಆರಾಮವಾಗಿ ಸ್ಥಳದಿಂದ ತೆರಳಿದ್ದಾರೆ. ಸ್ಥಳೀಯರ ಸಹಕಾರದಿಂದ ಈ ಹತ್ಯೆ ನಡೆದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಹತ್ಯೆಗೆ ಹಿಂದುಗಳ ಬಳಕೆ: ಭಯೋತ್ಪಾದನೆಗೆ ಹಣಕಾಸು ನೆರವು, ಟಾರ್ಗೆಟೆಡ್ ಕಿಲ್ಲಿಂಗ್, ಸಾಮಾಜಿಕವಾಗಿ ಅಶಾಂತಿ ಸೃಷ್ಟಿ ಪಿಎಫ್‌ಐನ ಕಾರ್ಯಶೈಲಿ. ಇದೇ ಕಾರ್ಯವಿಧಾನವನ್ನು ಸುಹಾಸ್ ಹತ್ಯೆಗೆ ಬಳಸಲಾಗಿದೆ. ನಿಷೇಧಗೊಂಡ ಬಳಿಕ ಹಿಂದುಗಳ ಮೂಲಕ ಪಿಎಫ್‌ಐ ಟಾರ್ಗೆಟೆಡ್ ಹತ್ಯೆ ನಡೆಸುತ್ತದೆ ಎಂಬ ಮಾಹಿತಿಯಿತ್ತು. ಸುಹಾಸ್ ಕೊಲೆಯಲ್ಲಿ ಇದು ಸಾಬೀತಾಗಿದೆ. ಸುಹಾಸ್‌ನ ಪರಿಚಯವೇ ಇಲ್ಲದ, ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದ ಕಳಸದ ರಂಜಿತ್ ಮತ್ತು ನಾಗರಾಜ್ ಅವರನ್ನು ಈ ಕೊಲೆಯಲ್ಲಿ ಬಳಸಿಕೊಳ್ಳಲಾಗಿದೆ. ಕೊಲೆಯಲ್ಲಿ ಹಿಂದುಗಳು ಇರಬೇಕು ಎಂದು ಉದ್ದೇಶಪೂರ್ವಕವಾಗಿ ಇವರಿಬ್ಬರನ್ನು ಬಳಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರ, ಗೃಹ ಸಚಿವರ ತನಿಖೆ ನಂಬಲನರ್ಹ: ಪ್ರಕರಣದ ತನಿಖೆ ನಡೆಸಲು ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ರಾಜ್ಯದ ಪೊಲೀಸರ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಆದರೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಗೃಹ ಸಚಿವರ ನಿಷ್ಠೆ, ಶ್ರದ್ಧೆ, ನಿಷ್ಪಕ್ಷಪಾತ ತನಿಖೆ ಬಗ್ಗೆ ಸಂಶಯವಿದೆ. ಕುಕ್ಕರ್ ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿತ್ತು. ಈ ಪ್ರಕರಣವನ್ನೂ ಹಳ್ಳ ಹಿಡಿಸುವ ಯೋಚನೆ ಸರ್ಕಾರಕ್ಕಿದೆ. ಸಿಎಂ, ಡಿಸಿಎಂ, ಗೃಹ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಕಾರಣದಿಂದ ಎನ್‌ಐಎ ತನಿಖೆ ನಡೆಸಬೇಕು ಎಂದರು.

ಪಿಎಫ್‌ಐ ಶಾಮೀಲು:

ಸುಹಾಸ್ ಹತ್ಯೆ ನಡೆದ ಸ್ಥಳದಲ್ಲಿದ್ದ ಬುರ್ಖಾಧಾರಿ ಮಹಿಳೆಯರಿಬ್ಬರು ಆರೋಪಿಗಳು ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಅಲ್ಲಿ ಇದ್ದ ಬಹುತೇಕ ಜನರಿಗೆ ಘಟನೆ ನಡೆಯುತ್ತದೆ ಎಂಬುದು ಮೊದಲೇ ತಿಳಿದಿತ್ತು. ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಗಳಾದ ಮುಸ್ತಾಫ ಮತ್ತು ಕಬೀರ್ ಸ್ಥಳದಲ್ಲಿದ್ದ ಬಗ್ಗೆ ಬಲವಾದ ಮಾಹಿತಿಯಿದೆ. ಸುಖಾನಂದ ಶೆಟ್ಟಿ ಹತ್ಯೆ ಆರೋಪಿ ನೌಷಾದ್ ಕೂಡಾ ಸುಹಾಸ್ ಹತ್ಯೆಗೆ ಹಣ ನೀಡಿದ್ದಾನೆ. ಪ್ರಮುಖ ಆರೋಪಿ ಸಫ್ವಾನ್ ಎಂಬಾತ ಪಿಎಫ್ಐ ಕಾರ್ಯಕರ್ತ ಇಸ್ಮಾಯಿಲ್ ಎಂಜಿನಿಯರ್ ಎಂಬಾತನ ಬಾಡಿಗೆ ಮನೆಯಲ್ಲಿ ವಾಸವಿದ್ದ. ಪಿಎಫ್ಐ ಈ ಹತ್ಯೆಯಲ್ಲಿ ಪಾಲ್ಗೊಂಡಿದೆ ಎಂದು ಕೆ.ಟಿ. ಉಲ್ಲಾಸ್ ಆರೋಪಿಸಿದರು.ವಿಶ್ವಹಿಂದು ಪರಿಷತ್, ಬಜರಂಗದಳ ಮುಖಂಡರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ೨೦೪೭ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಸಂಚಿನ ಭಾಗವಾಗಿ ಹಿಂದು ಮುಖಂಡರಿಗೆ ಬೆದರಿಕೆ ಹಾಕಿ, ಕೊಲೆ ಮಾಡಲಾಗುತ್ತಿದೆ. ಹೊರಗಿನಿಂದ ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡಿದರೆ ದೇಶದೊಳಗೆ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿ, ದಂಗೆ ಎಬ್ಬಿಸುವ ಹುನ್ನಾರ ನಡೆಯುತ್ತಿದೆ. ಇದರ ಭಾಗವಾಗಿ ಕಳೆದ ೧೦ ವರ್ಷದಿಂದ ಬೆದರಿಕೆಗಳು ಬರುತ್ತಿವೆ. ಅದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದರು.ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ರವಿ ಅಸೈಗೋಳಿ, ಹಿಂಜಾವೇ ಜಿಲ್ಲಾ ಸಂಯೋಜಕ ಲಿಖಿತ್ ಮೂಡುಶೆಡ್ಡೆ ಇದ್ದರು.ಬಾಕ್ಸ್‌-----

ಸುಹಾಸ್‌ ಕೊಲೆಯಲ್ಲಿ ಪೊಲೀಸ್‌ ಪಾಲುದಾರಿಕೆ?

ಸುಹಾಸ್ ಹತ್ಯೆ ಪ್ರಕರಣದಲ್ಲಿ ಬಜಪೆ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಸ್ಟೇಬಲ್ ರಶೀದ್ ಎಂಬವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕೆ.ಟಿ. ಉಲ್ಲಾಸ್ ಒತ್ತಾಯಿಸಿದರು.ರಶೀದ್ ಅವರು ಸುಹಾಸ್ ಶೆಟ್ಟಿ ಅವರಿಗೆ ಪದೇ ಪದೇ ಕರೆ ಮಾಡಿ ಹಿಂಸೆ ನೀಡುತ್ತಿದ್ದ ಬಗ್ಗೆ ಆತನ ಸ್ನೇಹಿತರು ಹಾಗೂ ತಾಯಿ ಹೇಳಿಕೊಂಡಿದ್ದಾರೆ. ಘಟನೆ ನಡೆಯುವ ಮೂರು ದಿನ ಮೊದಲು ಎಸಿಪಿ ಹಂತದ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿ ಸುಹಾಸ್ ಶೆಟ್ಟಿ ಆತ್ಮರಕ್ಷಣೆಗಾಗಿ ತನ್ನ ವಾಹನದಲ್ಲಿ ಯಾವುದೇ ಆಯುಧ ಇರಿಸಿಕೊಳ್ಳದಂತೆ ಸೂಚಿಸಿದ್ದಾರೆ. ಈ ಮಾಹಿತಿ ರಶೀದ್‌ಗೆ ತಿಳಿದಿತ್ತು. ಸುಹಾಸ್ ಕೊಲೆಯಲ್ಲಿ ರಶೀದ್ ಪಾಲುದಾರಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ರಶೀದ್‌ನನ್ನು ತನಿಖೆಗೆ ಒಳಪಡಿಸಬೇಕು ಎಂದು ಕೆ.ಟಿ.ಉಲ್ಲಾಸ್‌ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!