ಯಶಸ್ಸು ಸಾಧಿಸಲು ಉತ್ತಮ ಆಲೋಚನೆ ಇರಲಿ: ಸಿದ್ದರಾಜ ಕಲಕೋಟಿ

KannadaprabhaNewsNetwork | Published : May 7, 2025 12:49 AM

ಸಾರಾಂಶ

ದೇಶದ ಜನಸಂಖ್ಯೆಯಲ್ಲಿ ಶೇ. 40ರಷ್ಟಿರುವ ಯುವಜನಾಂಗ ದೇಶದ ಸಂಪತ್ತು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ.

ಹಾವೇರಿ: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಯುವಕರಲ್ಲಿ ಉತ್ತಮ ಆಲೋಚನೆ ಇರಬೇಕು. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸೃಜನಶೀಲ ಕಲಿಕೆಯ ಮೂಲಕ ಜೀವನ ಕೌಶಲ್ಯ ಕಲಿತುಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ತಿಳಿಸಿದರು.

ತಾಲೂಕಿನ ಹಾಲಗಿ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀಆಂಜನೇಯ ಶಿಲಾ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಮತ್ತು ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಪೀಠದ ಫಕೀರ ಸಿದ್ಧರಾಮ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವದ ನಾಲ್ಕನೆಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ. 40ರಷ್ಟಿರುವ ಯುವಜನಾಂಗ ದೇಶದ ಸಂಪತ್ತು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ಯುವಕರು ಜವಾಬ್ದಾರಿಯುತ ನಾಗರಿಕರಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಮತ್ತು ದೇಶದಲ್ಲಿ ಬದಲಾವಣೆ ಸಾಧ್ಯ ಎಂದರು.

ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಬದುಕುವ ಸಂಸ್ಕಾರ, ಉತ್ತಮ ಶಿಕ್ಷಣ ನೀಡಿ ಒಳ್ಳೆಯ ಸನ್ಮಾರ್ಗ ತೋರಿಸಬೇಕು ಎಂದರು.

ಸಿದ್ದಲಿಂಗಪ್ಪ ಕಮಡೊಳ್ಳಿ ಮಾತನಾಡಿ, ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಯುವಜನರು ನಡೆಯಬೇಕು. ಆ ಮೂಲಕ ಸಮಾಜದ ಒಳಿತಿಗೆ ನೆರವಾಗಬೇಕು ಎಂದರು.

ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಸ್ವಾಮೀಜಿ ಮಾತನಾಡಿ, ಆಂಜನೇಯ ಆತ್ಮವಿಶ್ವಾಸದ ಪ್ರತೀಕ. ಯುವಕರು ಜೀವನದಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಾದರೆ ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠ್ಠೆ ಹೊಂದಿರಬೇಕು. ಅಂದಾಗ ಮಾತ್ರ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ದೇಶದ ಬಹುಪಾಲು ಯುವಕರು ಸನ್ಮಾರ್ಗದಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಯುವಕರು ದುಶ್ಚಟಗಳಿಗೆ ದಾಸರಾಗಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಇಂಥ ಯುವಜನಾಂಗ ಸರಿದಾರಿಗೆ ತರಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುರೇಶ ಬಿಷ್ಟನಗೌಡರ, ಪಿ.ಕೆ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಆರ್.ಎಫ್ ನದಾಫ್ ಸ್ವಾಗತಿಸಿದರು. ಬಾಳೆಹೊಸೂರಿನ ಸಂಗನಬಸವ ದೇವರು ಬೀಳಗಿ ನಿರೂಪಿಸಿದರು. ಚನ್ನವೀರಯ್ಯ ಕುಲಕರ್ಣಿ ವಂದಿಸಿದರು. ಸಂಗಮೇಶ ಸೋಂತ ಮತ್ತು ಗದಗದ ಮಹಾಂತೇಶ ತಾಳಗಿ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಿ

ರಾಣಿಬೆನ್ನೂರು: ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸಂಜನಾ ಕುರುವತ್ತಿ ತಿಳಿಸಿದರು.ತಾಲೂಕಿನ ಕಮದೋಡ ಗ್ರಾಮದಲ್ಲಿ ಸ್ಥಳೀಯ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ದಾವಣಗೆರೆ ಎಸ್‌ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಹೃದಯ ರೋಗ, ನರರೋಗ, ಮೂತ್ರಕೋಶ, ಮೂತ್ರಪಿಂಡ ಮತ್ತು ಗ್ಯಾಸ್ಟೋಸಿನ್ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಶಿಬಿರದಲ್ಲಿ ಇಟಗಿ, ಮಾಗೋಡ, ಕಮದೋಡ ಹಾಗೂ ಮುದೇನೂರ ಗ್ರಾಮಗಳಿಂದ ಆಗಮಿಸಿದ್ದ ಸುಮಾರು ನೂರು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಪುಷ್ಪ ಮಾಳಗಿ, ಮಾಲತಿ ಮಾಚೇನಹಳ್ಳಿ, ಸುಜಾತ ಮಿಣಜಿಗಿ ಮುಂತಾದವರು ಉಪಸ್ಥಿತರಿದ್ದರು.

Share this article