ಮಕ್ಕಳು ಸಾಧಿಸುವ ಛಲ, ಮನೋಬಲ ಬೆಳೆಸಿಕೊಳ್ಳಲಿ

KannadaprabhaNewsNetwork |  
Published : May 07, 2025, 12:49 AM IST
ಫೋಟೋ, 6hsd3: ಸಾಣೆಯಲ್ಲಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಶಸ್ತಿ ನೀಡಿ ಬೀಳ್ಕೊಡಲಾಯಿತು | Kannada Prabha

ಸಾರಾಂಶ

ಸಾಣೇಯಲ್ಲಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಶಸ್ತಿ ನೀಡಿ ಬೀಳ್ಕೊಡಲಾಯಿತು.

ಕನ್ನಡಪ್ರಭ ವಾರ್ತ ಹೊಸದುರ್ಗ

ವ್ಯವಹಾರಜ್ಞಾನ ಅಧ್ಯಾತ್ಮ ಜ್ಞಾನ, ಸಾಂಸ್ಕೃತಿಕ ಜ್ಞಾನ, ಹೃದಯ ಶ್ರೀಮಂತಿಕೆಯ ಜ್ಞಾನ ಪಡೆದುಕೊಳ್ಳುವರೋ ಅವರು ನಿಜವಾದ ಶ್ರೀಮಂತರು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಇವರ ಆಶ್ರಯದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳು ತೋಟದಲ್ಲಿರುವ ಹೂವು ಇದ್ದಂತೆ. ಯಾವ ಮಕ್ಕಳು ಪ್ರತಿಭಾ ಹೀನರಲ್ಲ. ಪ್ರತಿಯೊಬ್ಬ ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಕವಾಗಿರುತ್ತದೆ. ಅದಕ್ಕೆ ಸ್ಫೂರ್ತಿ ತುಂಬಿದರೆ ಹೊರಹೊಮ್ಮುವುದು. ಮಕ್ಕಳು ಸಾಧಿಸುವ ಛಲ, ಮನೋಬಲ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಅಂಕಗಳಿಕೆ ಮುಖ್ಯವಾಗದೇ ಮಾನವೀಯ ಮೌಲ್ಯಗಳು‌ ಮುಖ್ಯವಾಗಬೇಕು. ನೈತಿಕ ನೆಲೆಗಟ್ಟಿನ ಮೇಲೆ ಶಿಕ್ಷಣ ಕಲಿತಾ ಹೋಗಬೇಕು. ಮಕ್ಕಳಿಗೆ ಸಾಂಸ್ಕೃತಿಕ, ನೈತಿಕ, ಧಾರ್ಮಿಕ ನೆಲಗಟ್ಟಿನ ಮೇಲೆ ಶಿಕ್ಷಣ ಕೊಡಬೇಕು. ಆಗ ತನ್ನ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯ ಎಂದರು.

ನಾಡಿನಲ್ಲಿ ನೇತಾರರ ಆದರ್ಶಗಳನ್ನು ಗಾಳಿಗೆ ತೂರಿ ಹೊತ್ತು ಬಂದಂತೆ ಕೊಡೆ ಹಿಡಿಯುವ ಪ್ರವೃತ್ತಿ ಹೆಚ್ಚಾಗಿದೆ. ನಮ್ಮ ನಾಡು ಧರ್ಮದ ನಾಡಾಗಬೇಕು. ವರ್ತಮಾನ ಕರಾಳವಾಗುತ್ತಿದೆ. ಮನೆ-ಮಠದಲ್ಲಿ, ಸಮಾಜದಲ್ಲಿ ಸರಿಯಾದ ತರಬೇತಿ ಸಿಕ್ಕಾಗ ಮಕ್ಕಳು ಮುಂದೆ ಭವಿಷ್ಯವನ್ನು ಕಟ್ಟುವ ಶಕ್ತಿ ಬೆಳೆಸಿಕೊಳ್ಳುವರು. ನಮ್ಮ ಮಕ್ಕಳು ನಾಡಿನ ಆಸ್ತಿಯಾಗಬೇಕು. ಇವತ್ತಿಗೂ ಅನೇಕರು ಸಾಮಾಜಿಕ ಕಾಳಜಿಯನ್ನಿಟ್ಟುಕೊಳ್ಳುವಂಥವರು ನಮ್ಮ ಕಣ್ಮುಂದೆ ಇರುವುದು ತುಂಬಾ ಸಂತೋಷ. ಯಾರಿಗೆ ಬಾಗುವ ಗುಣ ಇರುತ್ತೋ ಅವರು ಕಟ್ಟುವ ಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವರು. ವಿನಯ ವಿವೇಕವನ್ನು ಮೈಗೂಡಿಸಿಕೊಂಡರೆ ಏನಾದರೂ ಕ್ರಾಂತಿಯನ್ನು ಮಾಡಲು ಸಾಧ್ಯ ಎಂದರು.

ಇತ್ತೀಚಿಗೆ ಸೇವೆಯ ಹೆಸರಿನಲ್ಲಿ ಸ್ವಾರ್ಥ ಹೆಚ್ಚಾಗಿದೆ. ಮಕ್ಕಳಿಗೆ ಕನಸು ಕಟ್ಟುವ ಭಾವನೆಗಳಿವೆ. ಮಲಗಿಕೊಂಡಾಗ ಕನಸುಕಾಣುವುದು ಮುಖ್ಯವಲ್ಲ. ಯಾವ ವ್ಯಕ್ತಿ ಜಾಗೃತನಾಗಿ ಕನಸುಗಳನ್ನು ಕಟ್ಟುವನೋ ಆಗ ಗುರಿಯನ್ನು ಮುಟ್ಟುತ್ತಾ ಹೋಗುತ್ತಾನೆ. ಮಕ್ಕಳು ಹಿರಿಯರ ಬಗ್ಗೆ ಶ್ರದ್ಧೆ, ಗೌರವವನ್ನಿಟ್ಟುಕೊಳ್ಳಬೇಕು. ತಂದೆ ಮಕ್ಕಳಲ್ಲಿ ಪ್ರೀತಿ, ವಿಶ್ವಾಸದ ಬಾಂಧವ್ಯ ಇದ್ದಾಗ ಬದುಕಿಗೆ ಕಳೆ ಬರುವುದು. ಯಾವ ಮಕ್ಕಳು ತಂದೆ ತಾಯಿಗಳ ಪ್ರೀತಿಯನ್ನು ಕಳೆದುಕೊಳ್ಳಬಾರದು. ಮಕ್ಕಳು ಮೊಬೈಲ್, ಟಿವಿಯ ದಾಸರಾಗದೇ ಪುಸ್ತಕದ ದಾಸರಾಗಬೇಕು.ಈ ಹಿನ್ನಲೆಯಲ್ಲಿ ನಮ್ಮ ಮಕ್ಕಳು ವಚನ ಹೇಳುವ ಸಂಸ್ಕೃತಿ ಬೆಳೆಸಿಕೊಂಡರೆ ಅವರ ಬದುಕು ಸಂಸ್ಕಾರವಂತರಾಗುವುದು ಎಂದರು.

ಸಾಹಿತಿ ನಿಂಬೂ ಸೋಲಗಿ ಮಾತನಾಡಿ, ಇಂತಹ ಕಮ್ಮಟಗಳು ಪ್ರತಿಭೆಗೆ ಪ್ರೋತ್ಸಾಹ ನೀಡುವಂಥದ್ದು. ಸಾಣೇಹಳ್ಳಿಯಲ್ಲಿ ಕ್ರಿಯಾಶೀಲ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಮಕ್ಕಳು ಕೇಳಿ ಕಲಿಯದೇ ನೋಡಿ ಕಲಿಯುವರು. ರಂಗಭೂಮಿ, ಸಾಹಿತ್ಯ, ಸಂಗೀತದ ಮೂಲಕ ಮಕ್ಕಳು ತಮ್ಮ ವ್ಯಕ್ತಿತ್ವ ವಿಕಾಸವನ್ನು ಮಾಡಿಕೊಳ್ಳುವರು. ಪ್ರತಿಯೊಬ್ಬರು ಪ್ರದರ್ಶನಕ್ಕಿಂತ ಪ್ರೊಸೆಸ್ಸಾಗಿ ಕೆಲಸ ಮಾಡಬೇಕು. ಸಾಣೇಹಳ್ಳಿ ರಂಗಭೂಮಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು. ಮೌಲ್ಯಗಳನ್ನು ಬಿತ್ತುವ ಕೃಷಿಕರಾಗಬೇಕು. ನಮ್ಮ ಮಕ್ಕಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗುವಿಕೆಯಲ್ಲಿ ಹಿಂದುಳಿದಿದ್ದಾರೆ. ಅವರನ್ನು ಮುನ್ನೆಲೆಗೆ ತರಬೇಕು ಎಂದರು. ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಸಿ ಎನ್ ಅಶೋಕ, ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯಧ್ಯಕ್ಷ ಮಹಾದೇವ ಮಾತನಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಧ್ಯಕ್ಷತೆ ವಹಿಸಿದ್ದರು. ಕಮ್ಮಟಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ 300 ಜನ ವಿದ್ಯಾರ್ಥಿಗಳು ಮೂರು ದಿನಗಳಲ್ಲಿ ಕಲಿತ ಕತೆ, ಕವನ, ನಾಟಕ, ಮಲ್ಲಿಹಗ್ಗ, ಗಾಂಧಾರಿ ವಿದ್ಯೆ, ಚಿತ್ರಕಲೆ, ನೃತ್ಯ ಪ್ರದರ್ಶಿಸಿದರು. ವೇದಿಕೆಯ ಮೇಲೆ ಹೂವಿನಹಳ್ಳಿ ಸಿದ್ದೇಶ್, ಮಹೇಶ್, ಲತಾ, ಜಗದೀಶ್, ಪುಟ್ಟೇಗೌಡ್ರು, ವಿರೂಪಾಕ್ಷಪ್ಪ, ಸಂಜೀವ ದುಮಕನಾಡ, ವೆಂಕಟೇಶ್. ರವಿಸಾಗರ , ಮನೋಹರ್ , ಮಹಾದೇವಪ್ಪ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!