ಕನ್ನಡಪ್ರಭ ವಾರ್ತೆ ರಾಮನಗರ
ಚನ್ನಪಟ್ಟಣ ತಾಲೂಕಿನ ಮುದುಗೆರೆ, ಕೋಮನಹಳ್ಳಿ, ತಗಚಗೆರೆ, ಕೂಡ್ಲೂರು, ಪಟ್ಲು, ಕದರ ಮಂಗಲ, ಹಾರೋಹಳ್ಳಿ, ಕನ್ನಮಂಗಲ, ಕುಕ್ಕೂರುದೊಡ್ಡಿ ಸೇರಿದಂತೆ ಹಲವು ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂರಾರು ಸದಸ್ಯರು ವಾಹನಗಳಲ್ಲಿ ರಾಮನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಹಕಾರ ನಿಬಂಧಕ ವೈ.ವೆಂಕಟೇಶ್ ಅವರನ್ನು ವಜಾಗೊಳಿಸುವ ಮೂಲಕ ನ್ಯಾಯ ಕೊಡಬೇಕೆಂದು ಆಗ್ರಹಿಸಿದರು.
ತಾಲೂಕಿನಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಹಾಗೂ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲು ಯತ್ನಿಸುತ್ತಿರುವುದನ್ನು ವಿರೋಧಿಸಿ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾ ಸ್ಥಳದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾಕಾರರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.
ರಾಜಕೀಯ ಪಕ್ಷಗಳು ಐದು ವರ್ಷ ಅಧಿಕಾರ ಮಾಡಬಹುದು, ಮತ್ತೆ ಬದಲಾವಣೆ ಪರ್ವ ಬರುತ್ತದೆ. ಬೇರೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಕಾಂಗ್ರೆಸ್‌ನವರು ನಮಗೆ ದಾರಿ ಕಲಿಸಿ ಹೋಗಿದ್ದಾರೆ. 30 ವರ್ಷಗಳ ನಮ್ಮ ಅಧಿಕಾರ ಅವಧಿಯಲ್ಲಿ ಈ ರೀತಿ ಕೆಲಸ ಮಾಡಿಲ್ಲ. ಜಿಲ್ಲೆಯ ಜನರೇ ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಎಂದರು.
ಚನ್ನಪಟ್ಟಣ ತಾಲೂಕಿನ ಎಂಟು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಏಕಾಎಕಿ ನೋಟಿಸ್ ಜಾರಿ ಮಾಡಿದ್ದು, ಇದು ಗ್ರಾಮಗಳಲ್ಲಿ ಗೊಂದಲ ಸೃಷ್ಟಿಸಿ ಶಾಂತಿ ಕದಡುವ ಕೃತ್ಯವಾಗಿದೆ. ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮಣಿದು ಉದ್ದೇಶ ಪೂರ್ವಕವಾಗಿ ನೋಟಿಸ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತ್ತೇಗಾಲ ಯೋಜನೆ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಡಿಕೆಶಿ ಕೂಡ ಕ್ಯಾಬಿನೆಟ್‌ನಲ್ಲಿ ಇದ್ದರು. 540 ಕೋಟಿ ವೆಚ್ಚದ ಸತ್ತೇಗಾಲ ಯೋಜನೆಗೆ ಕುಮಾರಸ್ವಾಮಿ ಅವರು ಅನುಮೋದನೆ ನೀಡಿದ್ದರು. ಇವಾಗ ಬಂದು ಡಿಕೆಶಿ ಟವಲ್ ಹಾಸುವ ಕೆಲಸ ಮಾಡ್ತಾ ಇದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟರು.
ಇದೇ ವೇಳೆ ನಿಖಿಲ್ ಕುಮಾರಸ್ವಾಮಿ, ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಸಂಘಟನೆ ಮುಖಂಡರಾದ ಕೊತ್ತಿಪುರ ಗೋವಿಂದರಾಜು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದರು.