ಜೆಡಿಎಸ್ ಹಾಸನದಲ್ಲಿ ನಡೆಸುತ್ತಿರುವ ಸಮಾವೇಶ ಬಗ್ಗೆ ನನಗೆ ಮಾಹಿತಿ ಇಲ್ಲ. ಸಮಾವೇಶಕ್ಕೆ ನನ್ನನ್ನು ಯಾರೂ ಕರೆದಿಲ್ಲ ಎಂದು ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಜೆಡಿಎಸ್ ಹಾಸನದಲ್ಲಿ ನಡೆಸುತ್ತಿರುವ ಸಮಾವೇಶ ಬಗ್ಗೆ ನನಗೆ ಮಾಹಿತಿ ಇಲ್ಲ. ಸಮಾವೇಶಕ್ಕೆ ನನ್ನನ್ನು ಯಾರೂ ಕರೆದಿಲ್ಲ ಎಂದು ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನದ ಸಮಾವೇಶ ಬಗ್ಗೆ ನನಗೆ ಗೊತ್ತಿಲ್ಲ. ಕೋರ್ ಕಮಿಟಿಯವರನ್ನೇ ಕೇಳಬೇಕು. ನನ್ನನ್ನು ಕರೆಯದಿರುವುದಕ್ಕೆ ಬೇಸರ ಇಲ್ಲ. ಎಚ್.ಡಿ.ದೇವೇಗೌಡರು ಪಕ್ಷ ಕಟ್ಟಿ ಬೆಳೆಸಿದ್ದಾರೆ. ಈಗ ಪಕ್ಷ ಉಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ನಾನು ರೆಡ್ಡಿ ಕಾಂಗ್ರೆಸ್, ಕಾಂಗ್ರೆಸ್, ಜನತಾ ದಳದಲ್ಲೂ ಇದ್ದವನು
ನಾನು ರೆಡ್ಡಿ ಕಾಂಗ್ರೆಸ್, ಕಾಂಗ್ರೆಸ್, ಜನತಾ ದಳದಲ್ಲೂ ಇದ್ದವನು. ಸಿದ್ದರಾಮಯ್ಯ ಅವರು 1983ರಲ್ಲಿ ಚುನಾವಣೆಗೆ ನಿಂತಾಗ ಜವಾಬ್ದಾರಿ ತೆಗೆದುಕೊಂಡು ನಾಯಕರನ್ನು ಒಟ್ಟುಗೂಡಿಸಿ ಗೆಲ್ಲಿಸಲು ಕೆಲಸ ಮಾಡಿದ್ದೆ. ನಾನು ಕೂಡ ಅವರೊಂದಿಗೆ ರಾಜಕೀಯದಲ್ಲಿ ಬೆಳೆದೆ. ರಾಮಕೃಷ್ಣ ಹೆಗಡೆ ಸರ್ಕಾರ ಬಂದಾಗ ಜನತಾ ದಳದಲ್ಲಿ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಮೊದಲಾದವರ ಜೊತೆ 25 ವರ್ಷ ಕೆಲಸ ಮಾಡಿದ್ದಾರೆ. ನಾನು ಸಹ ಜಿಲ್ಲಾಧ್ಯಕ್ಷ, ಶಾಸಕ, ಮಂತ್ರಿಯಾಗಿ ಕೆಲಸ ಮಾಡಿದ್ದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಲವು ವರ್ಷದಿಂದ ಎಚ್‌ಡಿಕೆ ಮಾತನಾಡಿಲ್ಲ:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಬಹಳ ವರ್ಷಗಳಿಂದ ಮಾತನಾಡಿಲ್ಲ ಎಂದು ತಿಳಿಸಿದರು.
ನಾನು ಯಾವತ್ತೂ ಪಕ್ಷದಿಂದ ಬೇರೆಯಾಗಲ್ಲ. ನಾನು ಪ್ರತಿನಿಧಿಸುವ ಚಾಮುಂಡೇಶ್ವರಿ ಕ್ಷೇತ್ರ ಜಿಲ್ಲೆ ಮಾದರಿಯಲ್ಲಿ ದೊಡ್ಡದಾಗಿದೆ. ರೆವೆನ್ಯೂ ಲೇಔಟ್‌ಗಳಿಗೆ ನೀರು, ಒಳಚರಂಡಿ, ರಸ್ತೆ ಮತ್ತಿತರ ಸಮಸ್ಯೆಗಳಿವೆ. ಬೆಳಗ್ಗೆಯಿಂದ ರಾತ್ರಿವರೆಗೂ ಓಡಾಡಿದರೂ ಮುಗಿಯುತ್ತಿಲ್ಲ. ಹೆಚ್ಚಿನ ಅನುದಾನ ಬೇಕು. ಗ್ರೇಟರ್ ಮೈಸೂರು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವರು ಒಪ್ಪಿದ್ದಾರೆ. ಅವರು ಮನಸು ಮಾಡಿದರೆ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂದರು.
