ಸಾರಾಂಶ
ಯೋಗದ ಮೂಲಕ ದ್ಯಾನ ಮತ್ತು ಉಪಾಸನೆ ಮಾಡುವುದರಿಂದ ಮಾನವೀಯ ಮೌಲ್ಯಗಳು, ಧಾರ್ಮಿಕ ಆಚರಣೆ, ಶಿಸ್ತು, ಶಾಂತಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ನಗರದ ಚಾಮುಂಡಿಬೆಟ್ಟ ತಪ್ಪಲಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಯೋಗ ಚಾರಣ ಮತ್ತು ಯೋಗ ನಮಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಹುಟ್ಟಿರುವ ಯೋಗವು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶ್ವ ಮನ್ನಣೆ ಪಡೆದುಕೊಂಡಿದೆ. ಯೋಗ ಮಾಡುವುದರಿಂದ ರಕ್ತ ಪರಿಚಲನವಾಗಿ, ಮನಸ್ಸು ಮತ್ತು ದೇಹ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ ಎಂದರು.ಯೋಗದ ಮೂಲಕ ದ್ಯಾನ ಮತ್ತು ಉಪಾಸನೆ ಮಾಡುವುದರಿಂದ ಮಾನವೀಯ ಮೌಲ್ಯಗಳು, ಧಾರ್ಮಿಕ ಆಚರಣೆ, ಶಿಸ್ತು, ಶಾಂತಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.
500ಕ್ಕೂ ಅಧಿಕ ಯೋಗಪಟುಗಳು ಭಾಗಿ- ಯೋಗ ದಸರಾ ಉಪ ಸಮಿತಿಯು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಮೈಸೂರಿನ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಯೋಗ ಚಾರಣ ಮತ್ತ ದುರ್ಗಾ ನಮಸ್ಕಾರದಲ್ಲಿ ಬೆಳಗ್ಗೆ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿಕೊಂಡು, ಚಾಮುಂಡಿ ಬೆಟ್ಟದ ಮೇಲಿನ ಆವರಣ ತಲುಪಿ, ವಜ್ರಾಸನ, ವೀರಾಸನ, ವೀರಭದ್ರ ಆಸನ ಹಾಗೂ ಸಿಂಹ ಘರ್ಜನೆ ಸೇರಿಂದಂತೆ ಹಲವು ಭಂಗಿಯ ಯೋಗಾ ಆಸನಗಳನ್ನು ಮಾಡುವುದರ ಜೊತೆಗೆ 5 ಸುತ್ತು ದುರ್ಗಾ ನಮಸ್ಕಾರ ಮಾಡಿದರು.ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗಪಟುಗಳು ಹಾಗೂ ಯೋಗಾಸಕ್ತರು ಸೇರಿದಂತೆ 500ಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಜವರೇಗೌಡ, ಯೋಗ ದಸರಾ ಉಸ ಸಮಿತಿ ಅಧ್ಯಕ್ಷರಾದ ಎನ್.ಆರ್. ನಾಗೇಶ್, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು ಹಾಗೂ ಯೋಗ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಕೆ. ರಮ್ಯ, ಶಿಕ್ಷಣಾಧಿಕಾರಿಗಳು ಹಾಗೂ ಕಾರ್ಯಾಧ್ಯಕ್ಷ ನಿರೂಪ್ ವೆಸ್ಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಹಾಗೂ ಯೋಗ ದಸರಾ ಸಮಿತಿ ಸಹ ಕಾರ್ಯಧ್ಯಕ್ಷ ಕೆ. ಶಿಲ್ಪ, ಜಿಲ್ಲಾ ಆಯುಷ್ ಅಧಿಕಾರಿ ಹಾಗೂ ಯೋಗ ದಸರಾ ಉಸಮಿತಿ ಕಾರ್ಯದರ್ಶಿ ಡಾ.ಸಿ. ರೇಣುಕಾದೇವಿ, ಯುವ ದಸರಾ ಉಪ ಸಮಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.