ಕುಡಿಯುವ ನೀರಿನ ಸಮಸ್ಯೆ, ಮಳೆ ಹಾನಿ ಸಮೀಕ್ಷೆ ನಡೆಸಿ ವರದಿ ನೀಡಿ: ಡಾ. ವಿಜಯಮಹಾಂತೇಶ ದಾನಮ್ಮನವರ

KannadaprabhaNewsNetwork |  
Published : Apr 17, 2025, 12:02 AM IST
16ಎಚ್‌ವಿಆರ್2 | Kannada Prabha

ಸಾರಾಂಶ

ಹಾವೇರಿ ಜಿಲ್ಲೆ ವಿಪತ್ತು ನಿರ್ವಹಣೆ ಕುರಿತು ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಕುಡಿಯುವ ನೀರಿನ ಸಮಸ್ಯೆ ಹಾಗೂ ಬೆಳೆ ಹಾನಿಗಳ ಕುರಿತು ಜಂಟಿ ಸಮೀಕ್ಷೆ ಮಾಡಿ ತುರ್ತಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಹಾವೇರಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಮಳೆಯಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಹಾಗೂ ಬೆಳೆ ಹಾನಿಗಳ ಕುರಿತು ಜಂಟಿ ಸಮೀಕ್ಷೆ ಮಾಡಿ ತುರ್ತಾಗಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ, ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಮಳೆಯಾದ ದಿನ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡಿ ಕೂಡಲೇ ವರದಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಕೆಲಸದಲ್ಲಿ ವಿಳಂಬತನ ಸಹಿಸಲಾಗುವುದಿಲ್ಲ. ಹಾಗೇನಾದರೂ ಕಂಡುಬಂದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೀರು ಪೂರೈಕೆಗೆ ಕ್ರಮ: ಮಳೆಯಿಂದಾಗಿ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಸಮೀಕ್ಷೆ ಮಾಡಿ ಬೆಳೆಹಾನಿಗೆ ಒಳಗಾಗಿದ್ದರೆ ಜಂಟಿ ಸಮೀಕ್ಷೆ ಮಾಡಿ ಕೂಡಲೇ ವರದಿ ಸಲ್ಲಿಸಬೇಕು. ಇದರಿಂದ ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಕೆಲಸಗಳು ತುರ್ತಾಗಬೇಕು, ಜನರೊಂದಿಗೆ ಬೆರೆಯಬೇಕು, ಆಗ ಜನರಿಗೆ ಜಿಲ್ಲಾಡಳಿತ ತಮ್ಮೊಂದಿಗೆ ಇದೆ ಅನ್ನುವ ಭಾವನೆ ಬರುತ್ತದೆ. ಹಾನಿಗೊಳಗಾದ ಸ್ಥಳಗಳ ವೀಕ್ಷಣೆ ಮಾಡಿ ವರದಿ ಒಪ್ಪಿಸಬೇಕು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಹಾಗೆಯೇ ಕುಡಿಯುವ ನೀರು ಅಭಾವವಿರುವ ಗ್ರಾಮ ಪಂಚಾಯಿತಿಗಳಿಂದ ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಪೂರೈಕೆ ಮಾಡಬೇಕು ಮತ್ತು ತೆಗೆದುಕೊಂಡಿರುವ ಖಾಸಗಿ ಬೋರ್‌ವೆಲ್‌ಗಳ ಮಾಹಿತಿ ಬಗ್ಗೆ ಜಂಟಿ ಸಮೀಕ್ಷೆ ಮಾಡಿ ಸರಿಯಾದ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಬೇಸಿಗೆ ಮಳೆಯಿಂದ ಹಾನಿಗೊಳಗಾದ ಮನೆಗಳು ಹಾಗೂ ಬೆಳೆಗಳ ಕುರಿತು ಪ್ರಶ್ನೆ ಮಾಡಿದಾಗ, ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲು ತಡಕಾಡಿದರು. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ಹಾರಿಕೆ ಉತ್ತರಗಳು ಕೇಳಲು ಸಭೆ ಮಾಡಿಲ್ಲ, ಎಲ್ಲವನ್ನು ಸಿದ್ಧಪಡಿಸಿಕೊಂಡು ಸಭೆಗೆ ಹಾಜರಾಗಬೇಕು. ಇದು ನಿಮ್ಮ ಬೇಜವಾಬ್ದಾರಿ ಎತ್ತಿ ತೋರಿಸುತ್ತಿದೆ. ಕರ್ತವ್ಯಪ್ರಜ್ಞೆ ತುಂಬಾ ಮುಖ್ಯವಾಗುತ್ತದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದಲ್ಲಿ ನಿಮ್ಮನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಗೆ 90 ಸಾವಿರ ಕ್ವಿಂಟಲ್ ಜೋಳ ಖರೀದಿ ಗುರಿ ನಿಗದಿಪಡಿಸಲಾಗಿದೆ. ಕಳೆದ ಬಾರಿ ಅಂದರೆ ಜನವರಿ ವರೆಗೂ ಬಳ್ಳಾರಿಯಿಂದ ಜೋಳ ಪೂರೈಕೆಯಾಗುತ್ತಿತ್ತು, ಅದು ಕಳಪೆ ಮಟ್ಟದ್ದಿದೆ ಎಂದು ಸಾಕಷ್ಟು ದೂರುಗಳು ವ್ಯಕ್ತವಾಗಿದ್ದವು. ಈ ವರ್ಷ ನಮ್ಮಲ್ಲಿಯೇ ಜೋಳ ಸಂಗ್ರಹಣೆ ಮಾಡುತ್ತಿದ್ದೇವೆ. ಅದೇ ತೇರಾನಾದ ದೂರುಗಳು ವ್ಯಕ್ತವಾಗಬಾರದು, ಈ ನಿಟ್ಟಿನಲ್ಲಿ ಆಹಾರ ಇಲಾಖೆಯಿಂದ ಚೆಕ್‌ಲಿಸ್ಟ್ ಮಾಡಿ ನೀಡಲಾಗುವುದು. ಇಲ್ಲಿ ಆಯಾ ತಾಲೂಕಿನ ತಹಸೀಲ್ದಾರ್‌ಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ. ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಹೀಗಾಗಿ ವಾರದಲ್ಲಿ ಎರಡು ಇಲ್ಲವೇ ಮೂರು ದಿನಕ್ಕೊಮ್ಮೆ ಜೋಳ ಸಂಗ್ರಹಣೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದರು.

ಪ್ರಾರಂಭಿಕ ಹಂತದಿಂದಲೇ ತಯಾರಿ ಮಾಡಿಕೊಳ್ಳಬೇಕು. ಜೋಳ ಸಂಗ್ರಹಣಾ ಘಟಕ ಗೋದಾಮು ಸುಸ್ಥಿತಿಯಲ್ಲಿ ಇರಬೇಕು. ನೀರು ಸೋರಿಕೆ ಆಗಬಾರದು. ಸರಿಯಾಗಿ ನಿರ್ವಹಣೆಯಾಗಿರಬೇಕು. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರಬೇಕು, ಕಾನೂನು ಹಿತದೃಷ್ಟಿಯಿಂದ ಹಾಗೂ ರೈತರ ಹಿತದೃಷ್ಟಿಯಿಂದ ಜೋಳ ಸಂಗ್ರಹಣೆ ನೇರವಾಗಿ ಎಪಿಎಂಸಿಗಳ ಮೂಲಕ ಆಗಬೇಕು. ಆದೇಶ ಮಾಡಿ 15 ದಿನ ಕಳೆದಿದ್ದರೂ ಹಿರೇಕೆರೂರು, ಸವಣೂರು ಹಾಗೂ ಬ್ಯಾಡಗಿ ತಾಲೂಕಗಳಲ್ಲಿ ಇನ್ನೂ ನೋಂದಣಿ ಪ್ರಕ್ರಿಯೆ ಆಗಿಲ್ಲ. ಅಧಿಕಾರಿಗಳು ಕೂಡಲೇ ಜೋಳ ಸಂಗ್ರಹಣೆ ನೋಂದಣಿ ಕಾರ್ಯ ನಡೆಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ