ಗದಗ: ಶರಣರ ತತ್ವಾದರ್ಶಗಳು ಸಾರ್ವಕಾಲಿಕ ಸತ್ಯದ ದೀವಿಗೆಗಳಾಗಿವೆ. ಮಾನವನ ಬದುಕಿಗೆ ಶರಣರ ವಚನಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಹಾಗಾಗಿ ಶರಣರ ತತ್ವ ಪಾಲಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ರಕ್ಷಿಸಬೇಕಾಗಿದೆ. ಇದು ಇಂದಿನ ತುರ್ತು ಅಗತ್ಯ ಎಂದು ಶಿರಹಟ್ಟಿಯ ಪಪೂ ಮಹಾವಿದ್ಯಾಲಯದ ಪ್ರಾ. ಬಸವರಾಜ ಜಿ. ಗಿರಿತಿಮ್ಮಣ್ಣವರ ಹೇಳಿದರು.
ಅಕ್ಕಮಹಾದೇವಿ ಬೆಳಕಾಗಿ ಜನಿಸಿ, ಬೆಳಕಾಗಿ ಬದುಕಿ, ಬೆಳಕಾಗಿಯೇ ಹೋದಳು. ನಮ್ಮ ಆಯ್ಕೆ ನಮ್ಮದಾಗಿರಬೇಕೆ ವಿನಃ ಬೇರೆಯವರ ಆಯ್ಕೆಯಾಗಿರಬಾರದು. ಅಕ್ಕ ಆಯ್ದುಕೊಂಡದ್ದನ್ನು ಆಚರಿಸಿ ಎಂಥ ಸ್ತುತಿ-ನಿಂದೆಗಳು ಬಂದರೂ ಸಹ ಸಮಾಧಾನಿಯಾಗಿ ತನ್ನ ಗುರಿಯನ್ನು ತಲುಪಿದಾಕೆ, ಬಯಲಲ್ಲಿ ಬಯಲಾಗಿ ಹೋದ ಶರಣೆ. ಅಕ್ಕನ ಆದರ್ಶ ಸಾರ್ವಕಾಲಿಕ ಸಕಲರಿಗೂ ಮಾರ್ಗದರ್ಶಿಯಾದವುಗಳು ಎಂದರು.
ಗ್ರಾಮದ ಹಿರಿಯರಾದ ಸೋಮಣ್ಣ ಗಿರಡ್ಡಿ ಮಾತನಾಡಿ, ಮಧ್ಯರಾತ್ರಿ ಎದ್ದಹೋದವರೆಲ್ಲರೂ ಬುದ್ಧರಾಗಲಿಲ್ಲ. ಸಂಸಾರ ಬೇಡ, ಸಂಸ್ಕಾರ ಬೇಕು ಎಂದು ಎದ್ದು ಹೋದ ಸಿದ್ಧಾರ್ಥ ಮಾತ್ರ ಬುದ್ಧನಾದ. ಆದಕಾರಣ ನಾವು ಮಾಡುತ್ತಿರುವ ಕೆಲಸ ಪವಿತ್ರವಾಗಿರಬೇಕು. ಶರಣರ ಹಾಗೆ ನಮ್ಮ ಕಾಯಕದಲ್ಲಿ ನಾವು ಕೈಲಾಸ ಕಾಣುವವರಾಗಬೇಕು ಎಂದರು.ಶಿರಹಟ್ಟಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ನಮ್ಮ ಬದುಕು ಹೇಗಿರಬೇಕೆಂದರೆ. ನಮ್ಮ ನುಡಿ-ನಡೆಗಳು ಒಂದಾಗಿರಬೇಕು. ನಾವು ಬೇಡಿದ್ದನ್ನು ಶರಣರು ಬೇಡಲಿಲ್ಲ, ಶರಣರು ಬೇಡಿದ್ದನ್ನು ನಾವು ಬೇಡುತ್ತಿಲ್ಲ. ಇದೇ ನಮಗೂ ಮತ್ತು ಶರಣರಿಗೂ ಇರುವ ವ್ಯತ್ಯಾಸ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಅಕ್ಕ ತನ್ನ ಮನೆಯಿಂದ ಅರಮನೆಗೆ ಹೋಗಿ, ಅರಮನೆಯಿಂದ ಗುರುಮನೆಗೆ ಹೋಗಿ ಕೊನೆಯಲ್ಲಿ ಶಿವನ ಮನೆಗೆ ಹೋಗಿ, ಶಿವನಲ್ಲಿ ಲೀನಳಾದಳು. ಅಂತ ತ್ಯಾಗ ಸಾಮಾನ್ಯರಿಂದ ಸಾಧ್ಯವಿಲ್ಲ. ಆದರೆ ಅಕ್ಕನ ತತ್ವಾದರ್ಶಗಳನ್ನು ಪಾಲಿಸಿ ನಾವೆಲ್ಲ ಪಾವನರಾಗಬಹುದು ಎಂದರು.ಈ ವೇಳೆ ಉಪನ್ಯಾಸಕಾರು, ಉದ್ಘಾಟಕರು, ಅಧ್ಯಕ್ಷರು ಹಾಗೂ ಅತಿಥಿ ಅಭ್ಯಾಗತರನ್ನು ಸನ್ಮಾನಿಸಲಾಯಿತು. ಮಂಜುನಾಥ ಗುಡದೂರ ಅವರನ್ನು ಸನ್ಮಾನಿಸಲಾಯಿತು.
ಡಿ.ಎಸ್.ಬಾಪುರಿ ಸ್ವಾಗತಿಸಿದರು. ಮುರಿಗೆಪ್ಪ ಲಿಂಗಧಾಳ ಹಾಗೂ ಆರುಣಿ ಗುಡದೂರ ವಚನಗಾಯನ ಮಾಡಿದರು. ಸತೀಶ ಚೆನ್ನಪ್ಪಗೌಡ್ರ ಉಪಸ್ಥಿತರಿದ್ದರು. ಎಂ.ಎ.ಮಕಾನದಾರ ನಿರೂಪಿಸಿದರು. ಡಿ.ಕೆ.ನಿಂಬನಗೌಡ್ರ ವಂದಿಸಿದರು.