ಕನ್ನಡಪ್ರಭ ವಾರ್ತೆ ವಿಜಯಪುರ
ಅಸ್ಪೃಶ್ಯರಿಗೆ ಮತದಾನ ಹಕ್ಕು ಸಿಕ್ಕಾಗ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದು ಯಾರು?, ಎಲ್ಲರಿಗೂ ಮತದಾನ ಹಕ್ಕು ನೀಡಬೇಕು ಎಂದು ಡಾ.ಅಂಬೇಡ್ಕರ್ ಪ್ರತಿಪಾದಿಸಿದಾಗ ಮೋತಿಲಾಲ್ ನೆಹರೂ ವಿರೋಧಿಸಿದ್ದು ಏಕೆ? ಡಾ.ಅಂಬೇಡ್ಕರ ಗೆದ್ದ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟವರು ಯಾರು? ಎಂದು ಮಾಜಿ ಸಚಿವ ಎನ್. ಮಹೇಶ ಪ್ರಶ್ನಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಯಾತ್ರೆ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ೧೯೨೮ರಲ್ಲಿ ಅಂಬೇಡ್ಕರ್ ಅವರು ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡಬೇಕು ಎಂದು ಒತ್ತಾಯಿಸಿದಾಗ ಮೋತಿಲಾಲ ನೆಹರು ವಿರೋಧಿಸಿದ್ದು ಏಕೆ?, ೧೯೪೬ರಲ್ಲಿ ಸಂವಿಧಾನ ರಚನಾ ಸಭೆಗೆ ಡಾ.ಅಂಬೇಡ್ಕರ್ ಆಯ್ಕೆಯಾಗದಂತೆ ನೋಡಿಕೊಂಡವರು ಯಾರು?, ನೆಹರು ಅವರಿಗೆ ಅಂಬೇಡ್ಕರ್ ಬರೆದಿರುವ ಪತ್ರಗಳೇ ಪ್ರಧಾನಿಗಳ ಕಚೇರಿಯಲ್ಲಿ ಲಭ್ಯವಿರದಿರಲು ಕಾರಣವೇನು? ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಹಿಂದೂ ಕೋಡ್ ಬಿಲ್ ಮಂಡಿಸಿದಾಗ ಆ ಬಿಲ್ ಬಿದ್ದು ಹೋಗುವಂತೆ ಮಾಡಿದ್ದು ಯಾರು? ಎಂದು ಪ್ರಶ್ನಿಸಿದರು.
ಎಸ್ಸಿ,ಎಸ್ಟಿಗಳಷ್ಟೇ ಶೋಷಣೆಗೊಳಗಾದ ಇತರ ಹಿಂದುಳಿದ ಜಾತಿಗಳನ್ನು ಗುರುತಿಸಿ ಮೀಸಲಾತಿ ನೀಡಲು ಆಯೋಗ ರಚಿಸಿ ಎಂದಾಗಲೂ ಕಾಂಗ್ರೆಸ್ ರಚಿಸುವುದಿಲ್ಲ. ಜಮ್ಮು ಕಾಶ್ಮೀರದ ಸಮಸ್ಯೆ ಸಂಪೂರ್ಣ ಬಗೆಹರಿಸಿ ಎಂದಾಗಲೂ ಮಾಡುವುದಿಲ್ಲ. ಮುಸ್ಲಿಂರಿಗೆ ವಹಿಸಿದಷ್ಟು ಕಾಳಜಿ ಎಸ್ಸಿ,ಎಸ್ಟಿ, ಹಿಂದುಳಿದ ವರ್ಗಗಳಿಗೂ ವಹಿಸಿ ಎಂದರೂ ಕೇಳಲಿಲ್ಲ. ಕಾನೂನು ಸಚಿವಾಲಯದ ಬದಲು ಯೋಜನಾ ಖಾತೆ, ಹಣಕಾಸು ಖಾತೆ ಕೊಡಿ ಎಂದರೂ ಕೊಡಲಿಲ್ಲ, ಇದು ಕಾಂಗ್ರೆಸ್ ಡಾ.ಅಂಬೇಡ್ಕರ ಅವರನ್ನು ನಡೆಸಿಕೊಂಡ ರೀತಿ ಎಂದು ಎನ್.ಮಹೇಶ ಬಹಿರಂಗ ಪಡಿಸಿದರು.ಕಾಂಗ್ರೆಸ್ ಸರ್ಕಾರ ಮೊದಲ ಆರು ಪಂಚ ವಾರ್ಷಿಕ ಯೋಜನೆಗಳ ೩೦ವರ್ಷ ಎಸ್ಸಿ,ಎಸ್ಟಿಗಳ ಅಭಿವೃದ್ಧಿಗೆ ಒಂದು ರೂ. ಕೊಟ್ಟಿಲ್ಲ, ಇದನ್ನು ತಿಳಿದುಕೊಂಡೇ ಡಾ.ಅಂಬೇಡ್ಕರ ಅವರು ಕಾಂಗ್ರೆಸ್ ಸುಡುತ್ತಿರುವ ಮನೆ, ದಲಿತ ಸಮುದಾಯ ಕಾಂಗ್ರೆಸ್ ಸೇರಬೇಡಿ ಎಂದು ಕರೆ ನೀಡಿದ್ದರು. ದೆಹಲಿಯಲ್ಲಿ ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೆ ಸ್ಥಳಾವಕಾಶ ನೀಡದೇ ಇರುವುದು ನಿಮ್ಮ ಮನಸಿನಲ್ಲಿನ ಅಸ್ಪೃಶ್ಯತೆಯ ಪ್ರತಿಬಿಂಬ ಎಂದು ಕಿಡಿಕಾರಿದರು.ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ, ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಚಂದ್ರಶೇಖರ ಕವಟಗಿ, ಸಾಬು ಮಾಶ್ಯಾಳ, ಸಂಜೀವ ಐಹೊಳೆ, ಜಗದೀಶ ಹಿರೇಮನಿ, ಸಾಬು ದೊಡಮನಿ, ಮಹೇಂದ್ರಕುಮಾರ ನಾಯಕ, ಚಿದಾನಂದ ಚಲವಾದಿ, ಸ್ವಪ್ನಾ ಕಣಮುಚನಾಳ, ವಿಜಯ ಜೋಶಿ, ರವಿಕಾಂತ ವಗ್ಗೆ ಮುಂತಾದವರು ಉಪಸ್ಥಿತರಿದ್ದರು.